ಕೇರಳದಲ್ಲಿ ನಿಫಾ ಸೋಂಕು ಭೀತಿ: ಆರೋಗ್ಯ ಇಲಾಖೆ ಎಚ್ಚರಿಕೆ

Update: 2023-09-12 02:23 GMT

ಕೋಝಿಕ್ಕೋಡ್: ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಎರಡು ಅಸಹಜ ಸಾವು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಸಚಿವಾಲಯ ನಿಫಾ ಸೋಂಕು ಭೀತಿಯ ಬಗ್ಗೆ ಎಚ್ಚರಿಕೆ ನೀಡಿದೆ.

ಈ ಎರಡು ಸಾವುಗಳು ನಿಫಾ ವೈರಸ್ ನಿಂದ ಸಂಭವಿಸಿವೆ ಎಂದು ಶಂಕಿಸಲಾಗಿದ್ದು, ಮೃತರ ಪೈಕಿ ಒಬ್ಬರ ಸಂಬಂಧಿಕರು ಕೂಡಾ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾಜ್ ಉನ್ನತ ಮಟ್ಟದ ಸಭೆ ನಡೆಸಿದ್ದು, ಇದರ ವಿವರಗಳು ಇನ್ನೂ ಲಭ್ಯವಾಗಿಲ್ಲ. ಕೇರಳದಲ್ಲಿ ಇದುವರೆಗೆ ಮೂರು ಬಾರಿ ನಿಫಾ ವೈರಸ್ ಸೋಂಕು ಹರಡಿದ್ದು, ಎರಡು ಬಾರಿ ಕೋಝಿಕ್ಕೋಡ್ನಿಂದಲೇ ವರದಿಯಾಗಿವೆ ಎನ್ನುವುದು ಗಮನಾರ್ಹ.

2018ರ ಮೇ ತಿಂಗಳಲ್ಲಿ ಕೋಝಿಕ್ಕೋಡ್  ನಲ್ಲಿ ದಕ್ಷಿಣ ಭಾರತದ ಮೊಟ್ಟಮೊದಲ ಪ್ರಕರಣ ವರದಿಯಾಗಿತ್ತು. 23 ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, ಈ ಪೈಕಿ 18 ಪ್ರಕರಣಗಳು ಪ್ರಯೋಗಾಲಯಗಳಲ್ಲಿ ದೃಢಪಟ್ಟಿದ್ದವು. 17 ಮಂದಿ ಈ ಸಾಂಕ್ರಾಮಿಕದಿಂದ ಮೃತಪಟ್ಟಿದ್ದರು. 2019ರಲ್ಲಿ ಎರ್ನಾಕುಲಂನನಲ್ಲಿ ಎರಡನೇ ಪ್ರಕರಣ ವರದಿಯಾಗಿತ್ತು. 2021ರಲ್ಲಿ ಕೋಝಿಕ್ಕೋಡ್ ನಲ್ಲಿ ಮತ್ತೆ ನಿಫಾ ಸೋಂಕು ಪ್ರಕರಣ ವರದಿಯಾಗಿದ್ದು, 12 ವರ್ಷದ ಬಾಲಕ ಮೃತಪಟ್ಟಿದ್ದ.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News