ಮ್ಯಾನ್ಮಾರ್, ಮಣಿಪುರ ನಿರಾಶ್ರಿತರ ಬಗ್ಗೆ ಮಿಝೋರಾಮ್‌ನ ಧೋರಣೆಯಲ್ಲಿ ಬದಲಾವಣೆಯಿಲ್ಲ: ನಿಯೋಜಿತ ಮುಖ್ಯಮಂತ್ರಿ ಲಾಲ್ಡುಹೋಮ

Update: 2023-12-05 14:46 GMT

ಲಾಲ್ಡುಹೋಮ (PTI) 

ಐಝ್ವಾಲ್: ಮ್ಯಾನ್ಮಾರ್ ಮತ್ತು ಮಣಿಪುರದ ನಿರಾಶ್ರಿತರಿಗೆ ಆಶ್ರಯ ಮತ್ತು ನೆರವು ನೀಡುವುದನ್ನು ನನ್ನ ಸರಕಾರ ಮುಂದುವರಿಸುವುದು ಎಂದು ಮಿಝೋರಾಮ್ ವಿಧಾನಸಭಾ ಚುನಾವಣೆಯಲ್ಲಿ ರೊರಾಮ್ ಪೀಪಲ್ಸ್ ಮೂವ್‌ಮೆಂಟ್ (ಝಡ್‌ಪಿಎಮ್)ಪಕ್ಷವು ಜಯಭೇರಿ ಬಾರಿಸಿದ ಒಂದು ದಿನದ ಬಳಿಕ, ನಿಯೋಜಿತ ಮುಖ್ಯಮಂತ್ರಿಯಾಗಿ ಲಾಲ್ಡುಹೋಮ ಹೇಳಿದ್ದಾರೆ.

ಮಿಝೋರಾಮ್‌ನಲ್ಲಿರುವ ಮ್ಯಾನ್ಮಾರ್ ನಿರಾಶ್ರಿತರ ಬಯೋಮೆಟ್ರಿಕ್ ದತ್ತಾಂಶಗಳನ್ನು ಸಂಗ್ರಹಿಸುವಂತೆ ಕೇಂದ್ರ ಸರಕಾರ ಸೆಪ್ಟಂಬರ್‌ನಲ್ಲಿ ನಿರ್ದೇಶನ ಹೊರಡಿಸಿತ್ತು. ಆದರೆ ನಿರ್ಗಮನ ಮುಖ್ಯಮಂತ್ರಿ ಹಾಗೂ ಮಿರೆ ನ್ಯಾಶನಲ್ ಫ್ರಂಟ್ ನಾಯಕ ರೊರಾಮ್‌ತಂಗ ತನ್ನ ಸರಕಾರದ ಅವಧಿಯಲ್ಲಿ ಕೇಂದ್ರ ಸರಕಾರದ ನಿರ್ದೇಶನವನ್ನು ಪಾಲಿಸಲು ನಿರಾಕರಿಸಿದ್ದರು ಹಾಗೂ ನಿರಾಶ್ರಿತರಿಗೆ ನೆರವು ನೀಡುವುದನ್ನು ಮುಂದುವರಿಸಿದ್ದರು. ಮಣಿಪುರದಿಂದ ಪಲಾಯನ ಮಾಡುತ್ತಿರುವ ಕುಕಿ-ರೊ ಸಮುದಾಯದ ಜನರಿಗೂ ಅವರು ಸ್ವಾಗತ ನೀಡಿದ್ದರು.

ಮಿರೊ ಸಮುದಾಯದ ಜನರು ಮಣಿಪುರದ ಕುಕಿ ಮತ್ತು ಮ್ಯಾನ್ಮಾರ್‌ನ ಚಿನ್ ಬುಡಕಟ್ಟುಗಳ ಜನರೊಂದಿಗೆ ಗಾಢ ಜನಾಂಗೀಯ ಬಾಂಧವ್ಯ ಹೊಂದಿದ್ದಾರೆ.

2021 ಫೆಬ್ರವರಿಯ ಬಳಿಕ, ಸುಮಾರು 35,000 ಚಿನ್ ನಿರಾಶ್ರಿತರು ಮ್ಯಾನ್ಮಾರ್‌ನಿಂದ ಮಣಿಪುರಕ್ಕೆ ಬಂದಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಮಣಿಪುರದಲಿ ಕುಕಿ ಮತ್ತು ಮೆತೈ ಸಮುದಾಯಗಳ ಜನರ ನಡುವೆ ಜನಾಂಗೀಯ ಸಂಘರ್ಷ ಸ್ಫೋಟಗೊಂಡ ಬಳಿಕ ಸುಮಾರು 12,000 ಕುಕಿ-ರೊ ಸಮುದಾಯದ ಜನರೂ ಮಿರೆರಾಮ್‌ಗೆ ರಾಜ್ಯಕ್ಕೆ ಪಲಾಯನಗೈದಿದ್ದಾರೆ.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಮಿರೆ ನ್ಯಾಶನಲ್ ಫ್ರಂಟ್ ತನ್ನನ್ನು ರೆ ರಾಷ್ಟ್ರೀಯವಾದಿ ಪಕ್ಷ ಎಂಬುದಾಗಿ ಬಿಂಬಿಸಿಕೊಂಡಿತ್ತು. ಮ್ಯಾನ್ಮಾರ್ ನಿರಾಶ್ರಿತರನ್ನು ಹೊರದಬ್ಬುವಂತೆ ಕೇಂದ್ರ ಸರಕಾರ ಒಡ್ಡುತ್ತಿರುವ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯ ಇನ್ನೊಂದು ಸಂಘಟನೆಗೆ ಇರಲಾರದು ಎಂದು ಅದು ಹೇಳಿತ್ತು.

ಆದರೆ, ರಾಜ್ಯದ 40 ವಿಧಾನಸಭಾ ಸ್ಥಾನಗಳ ಪೈಕಿ 27ರಲ್ಲಿ ಗೆದ್ದಿರುವ ರೊರಾಮ್ ಪೀಪಲ್ಸ್ ಮೂವ್‌ಮೆಂಟ್, ನಿರಾಶ್ರಿತರ ಕುರಿತ ರಾಜ್ಯ ಸರಕಾರದ ಧೋರಣೆ ಬದಲಾಗುವುದಿಲ್ಲ ಎಂದು ಹೇಳಿದೆ.

‘‘ಇದು ಮಾನವೀಯ ವಿಷಯ’’ ಎಂದು ಮಾಜಿ ಐಪಿಎಸ್ ಅಧಿಕಾರಿ ಲಾಲ್ಡುಹೋಮ ಹೇಳಿದರು.

ಲಾಲ್ಡುಹೋಮ ನೇತೃತ್ವದ ರೊರಾಮ್ ಪೀಪಲ್ಸ್ ಮೂವ್‌ಮೆಂಟ್ ಪಕ್ಷದ ಸರಕಾರವು ಡಿಸೆಂಬರ್ 8ರಂದು ರಾಜಧಾನಿ ಐಝ್ವಾಲ್‌ನಲ್ಲಿ ಪ್ರಮಾಣವಚನ ಸ್ವೀಕರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News