ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ನೀಡಲಾಗಿರುವ ಭೂಮಿಯನ್ನು ವಾಪಸ್‌ ಪಡೆಯಿರಿ: ಉತ್ತರ ಪ್ರದೇಶ ಸಿಎಂಗೆ ಪತ್ರ ಬರೆದ ಬಿಜೆಪಿ ನಾಯಕ

Update: 2024-12-18 11:30 GMT

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ | PC : PTI 

ಅಯೋಧ್ಯೆ: ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ನೀಡಲಾಗಿರುವ ಭೂಮಿಯಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳು ಪ್ರಾರಂಭಗೊಳ್ಳದೆ ಇರುವುದರಿಂದ, ಆ ಸ್ಥಳವನ್ನು ವಾಪಸ್‌ ಪಡೆಯಿರಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ಅವರಿಗೆ ಬಿಜೆಪಿ ನಾಯಕರೊಬ್ಬರು ಪತ್ರ ಬರೆದಿದ್ದಾರೆ.

ಸುಮಾರು ಒಂದು ಶತಮಾನದ ಕಾಲ ನಡೆದ ಬಾಬ್ರಿ ಮಸೀದಿ ಭೂ ವ್ಯಾಜ್ಯದ ಸಂಬಂಧ ನವೆಂಬರ್ 9, 2019ರಂದು ತೀರ್ಪು ನೀಡಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನೊಳಗೊಂಡ ಪಂಚ ಸದಸ್ಯರ ನ್ಯಾಯಪೀಠ, ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿತ್ತು. ಅಲ್ಲದೆ, ಅಯೋಧ್ಯೆಯಲ್ಲೇ ಮಸೀದಿ ನಿರ್ಮಾಣಕ್ಕೆ ಪರ್ಯಾಯವಾಗಿ ಐದು ಎಕರೆ ಜಾಗವನ್ನು ಮಂಜೂರು ಮಾಡಬೇಕು ಎಂದೂ ಆದೇಶಿಸಿತ್ತು.

ಇದಾದ ನಂತರ, ಅಯೋಧ್ಯೆ ಜಿಲ್ಲೆಯ ಧನ್ನಿಪುರ್ ಪ್ರದೇಶದಲ್ಲಿ ಉತ್ತರ ಪ್ರದೇಶ ಸರಕಾರ ಮಂಜೂರು ಮಾಡಿರುವ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಲು ಸುನ್ನಿ ಕೇಂದ್ರ ವಕ್ಫ್ ಮಂಡಳಿ ಇಂಡೊ-ಇಸ್ಲಾಮಿಕ್ ಸಾಂಸ್ಕೃತಿಕ ಪ್ರತಿಷ್ಠಾನವನ್ನು ರಚಿಸಿತ್ತು.

ಈ ಕುರಿತು ಡಿಸೆಂಬರ್ 10ರಂದು ಮುಖ್ಯಮಂತ್ರಿ ಆದಿತ್ಯನಾಥ್ ಗೆ ಪತ್ರ ಬರೆದಿರುವ ಬಿಜೆಪಿ ನಾಯಕ ರಜನೀಶ್ ಸಿಂಗ್, ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ, ತಮಗೆ ಮಂಜೂರಾಗಿರುವ ಜಾಗದಲ್ಲಿ ಮಸೀದಿ ನಿರ್ಮಿಸಲು ಮುಸ್ಲಿಂ ಸಮುದಾಯ ಯಾವುದೇ ಗಮನಾರ್ಹ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

“ಅವರ ಉದ್ದೇಶ ಮಸೀದಿ ನಿರ್ಮಿಸುವುದಲ್ಲ. ಬದಲಿಗೆ, ಮಸೀದಿಯ ಸೋಗಿನಲ್ಲಿ ಅಪಸ್ವರವನ್ನು ಹೊರಡಿಸುವುದಾಗಿದೆ” ಎಂದೂ ಅವರು ಆಕ್ಷೇಪಿಸಿದ್ದಾರೆ.

“ಸುಪ್ರೀಂ ಕೋರ್ಟ್ ಆದೇಶದನ್ವಯ, ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ಅಯೋಧ್ಯೆಯಲ್ಲಿ ಮಂಜೂರು ಮಾಡಲಾಗಿರುವ ಜಮೀನನ್ನು ಮಸೀದಿಯ ಜವಾಬ್ದಾರಿಯುತ ಜನರು ಇನ್ನಿತರ ಉದ್ದೇಶಗಳಿಗೆ ಬಳಸುತ್ತಿದ್ದಾರೆ. ಮಸೀದಿ ನಿರ್ಮಿಸುವುದು ಮುಸ್ಲಿಂ ಸಮುದಾಯದ ಉದ್ದೇಶವೇ ಅಲ್ಲ. ಬದಲಿಗೆ, ಮಸೀದಿಯ ಸೋಗಿನಲ್ಲಿ ಅಡಚಣೆ ಹಾಗೂ ಅವ್ಯವಸ್ಥೆಯನ್ನು ಜೀವಂತವಾಗಿಡುವುದೇ ಅದರ ಉದ್ದೇಶವಾಗಿದೆ. ಆದರೆ, ನಿಮ್ಮ ನಾಯಕತ್ವದಲ್ಲಿ ಅದು ಸಾಧ್ಯವಾಗುವುದಿಲ್ಲ” ಎಂದೂ ತಮ್ಮ ಪತ್ರದಲ್ಲಿ ರಜನೀಶ್ ಸಿಂಗ್ ದೂರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News