ಮಹಾರಾಷ್ಟ್ರದಲ್ಲಿ ಶಿಕ್ಷಕಿಯರಿಗೂ ಇನ್ನು ವಸ್ತ್ರಸಂಹಿತೆ!

Update: 2024-03-16 08:13 GMT

ಸಾಂದರ್ಭಿಕ ಚಿತ್ರ

ಮುಂಬೈ: ಇದೇ ಮೊದಲ ಬಾರಿಗೆ ಮಹಾರಾಷ್ಟ್ರ ಸರ್ಕಾರ ಶಾಲಾ ಶಿಕ್ಷಕಿಯರಿಗೂ ವಸ್ತ್ರಸಂಹಿತೆ ಜಾರಿ ಮಾಡಿದೆ. ಈ ಸಂಹಿತೆಯ ಪ್ರಕಾರ, ಶಿಕ್ಷಕಿಯರು ಜೀನ್ಸ್ ಹಾಗೂ ಟಿ-ಶರ್ಟ್, ಕಡುಬಣ್ಣದ ಬಟ್ಟೆಗಳು ಅಥವಾ ಡಿಸೈನ್ ಅಥವಾ ಪ್ರಿಂಟ್ ಹೊಂದಿರುವ ಉಡುಪುಗಳನ್ನು ಧರಿಸುವಂತಿಲ್ಲ. ಶಿಕ್ಷಕಿಯರು ಸಲ್ವಾರ್ ಅಥವಾ ಚೂಡಿದಾರ್ ಗಳನ್ನು ಕುರ್ತಾ ಮತ್ತು ದುಪ್ಪಟಾ ಸಹಿತವಾಗಿ ಧರಿಸಬೇಕು ಅಥವಾ ಸೀರೆ ಉಡಬೇಕು. ಪುರುಷರು ಶರ್ಟ್ ಮತ್ತು ಪ್ಯಾಂಟ್ ಧರಿಸಿ ಇನ್‍ಶರ್ಟ್ ಮಾಡಬೇಕು.

ಶಾಲಾ ಶಿಕ್ಷಣ ಇಲಾಖೆ ಈ ಸಂಬಂಧ ಸರ್ಕಾರಿ ನಿರ್ಣಯವನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಶಿಕ್ಷಕರ ನಡವಳಿಕೆಗಳು ಮಕ್ಕಳ ಮೇಲೆ ಪರಿಣಾಮ ಬೀರುವುದರಿಂದ ಶಿಕ್ಷಕರು ತಮ್ಮ ಉಡುಪಿನಲ್ಲಿ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಅಸಮರ್ಪಕವಾದ ಬಟ್ಟೆಗಳನ್ನು ಶಿಕ್ಷಕರು ಧರಿಸಿದಲ್ಲಿ ಅದು ಶಾಲಾ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಸರ್ಕಾರಿ ನಿರ್ಣಯದಲ್ಲಿ ಶಾಲಾ ಶಿಕ್ಷಕರಿಗೆ ವಸ್ತ್ರಸಂಹಿತೆಗೆ ಸಂಬಂಧಿಸಿದ ಒಂಬತ್ತು ಅಂಶಗಳ ಮಾರ್ಗಸೂಚಿಯನ್ನು ನೀಡಲಾಗಿದ್ದು, ಇದು ಸರ್ಕಾರಿ ಹಾಗೂ ಖಾಸಗಿ ಶಾಲೆಗಳು, ಮಂಡಳಿಗೆ ಸಂಲಗ್ನತ್ವ ಹೊಂದಿರುವ ಎಲ್ಲ ಶಾಲೆಗಳಿಗೆ ಅನ್ವಯಿಸುತ್ತದೆ.

ಈ ವಸ್ತ್ರಸಂಹಿತೆಯ ಉದ್ದೇಶವನ್ನು ಶಿಕ್ಷಕರು ಮತ್ತು ಶಿಕ್ಷಣ ತಜ್ಞರು ಟೀಕಿಸಿದ್ದಾರೆ. "ಸೂಕ್ತ ಉಡುಪು ಧರಿಸುವ ಬಗ್ಗೆ ಈಗಾಗಲೇ ಶಿಕ್ಷಕರಿಗೆ ಪ್ರಜ್ಞೆ ಇದೆ. ಶಾಲೆಗಳು ಕೂಡಾ ತಮ್ಮದೇ ವಿಧಾನದಲ್ಲಿ ಎಚ್ಚರಿಕೆ ವಹಿಸುತ್ತಿವೆ. ಶಿಕ್ಷಕರಿಗಾಗಿ ಇಂಥ ವಸ್ತ್ರಸಂಹಿತೆಯನ್ನು ಬಿಡುಗಡೆ ಮಾಡುವ ಅಗತ್ಯ ಇರಲಿಲ್ಲ" ಎಂದು ಮುಂಬೈನ ಶಿಕ್ಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಏನನ್ನು ಧರಿಸಬೇಕು ಎನ್ನುವುದು ಆಯಾ ಸ್ಥಳೀಯ ಅಂಶಗಳ ಮತ್ತು ವ್ಯಕ್ತಿಗಳ ಆಯ್ಕೆ ಎಂದು ಶಾಲೆಗಳು ಮತ್ತು ಶಿಕ್ಷಕರು ಅಭಿಮತ ವ್ಯಕ್ತಪಡಿಸಿದ್ದಾರೆ.

ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಉನ್ನತ ಅಧಿಕಾರಿಯೊಬ್ಬರು "ಇದು ಕೇವಲ ಮಾರ್ಗಸೂಚಿ. ಇದನ್ನು ಕಡ್ಡಾವೆಂದು ಪರಿಗಣಿಸಬೇಕಾಗಿಲ್ಲ. ಇದನ್ನು ಅನುಸರಿಸದಿದ್ದರೆ, ಯಾವುದೇ ಕ್ರಮ ಕೈಗೊಳ್ಳುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News