ರಾಷ್ಟ್ರಪತಿ ಭಾಷಣದಲ್ಲಿ ನೆಹರೂ ಹೆಸರು ಉಲ್ಲೇಖ ಇಲ್ಲ : ದ್ರೌಪದಿ ಮುರ್ಮುಗೆ ಕಾಂಗ್ರೆಸ್ ತರಾಟೆ
ಹೊಸದಿಲ್ಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟದ ಅಪ್ರತಿಮ ವ್ಯಕ್ತಿಗಳಲ್ಲಿ ಜವಾಹಾರ್ ಲಾಲ್ ನೆಹರೂ ಅವರ ಹೆಸರು ಉಲ್ಲೇಖಿಸದೇ ಇರುವ ಬಗ್ಗೆ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಇದು ಇತಿಹಾಸದಿಂದ ಭಾರತದ ಮೊದಲ ಪ್ರಧಾನಿಯನ್ನು ಅಳಿಸಿ ಹಾಕುವ ನಿರಂತರ ಅಭಿಯಾನದ ಒಂದು ಭಾಗ ಎಂದು ಹೇಳಿದೆ.
ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್, 1947 ಆಗಸ್ಟ್ 14ರಂದು ಮಧ್ಯರಾತ್ರಿ ಸೆಂಟ್ರಲ್ ಹಾಲ್‌ನಲ್ಲಿ ಜವಾಹರ್‌ಲಾಲ್ ನೆಹರೂ ಅವರು ಮಾಡಿದ ವಿಶ್ವ ಪ್ರಸಿದ್ಧ ಭಾಷಣ ‘ವಿಧಿಯೊಂದಿಗೆ ಸರಸ’ವನ್ನು ನೆನಪಿಸಿಕೊಂಡರು.
1947 ಆಗಸ್ಟ್ 15ರಂದು ಆಲ್ ಇಂಡಿಯಾ ರೇಡಿಯೋದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದ ಆರಂಭದಲ್ಲಿ ನೆಹರೂ ಅವರು ತನ್ನನ್ನು ‘ಭಾರತೀಯರ ಮೊದಲ ಸೇವಕ’ ಎಂದು ವಿವರಿಸಿಕೊಂಡಿದ್ದರು. ಅವರು ದೇಶಕ್ಕೆ ನೀಡಿದ ಸಂದೇಶ 1947 ಆಗಸ್ಟ್ 15ರ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.
ಇದಲ್ಲದೆ, ಈ ದಿನ 14 ಸಚಿವರು ಪ್ರಮಾಣ ವಚನ ಸ್ವೀಕರಿಸಿದ ದಿನ ಕೂಡ ಆಗಿದೆ ಎಂಬುದನ್ನು ಅವರು ನೆನಪಿಸಿಕೊಂಡರು. ‘‘ನೆಹರೂ ಹಾಗೂ ಸರ್ದಾರ್ ಪಟೇಲ್ ಅಲ್ಲದೆ ರಾಜೇಂದ್ರ ಪ್ರಸಾದ್, ಮೌಲನಾ ಆಝಾದ್, ಡಾ. ಅಂಬೇಡ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ, ಜಗಜೀವನ್ ರಾಮ್, ರಾಜಕುಮಾರಿ, ಅಮೃತ್ ಕೌರ್, ಸರ್ದಾರ್ ಬಲದೇವ್ ಸಿಂಗ್, ಸಿ.ಎಚ್. ಭಾಭಾ, ಜಾನ್ ಮಥಾಯಿ, ಆರ್.ಕೆ. ಶಣ್ಮುಖಂ ಚೆಟ್ಟಿ, ಎನ್.ವಿ. ಗಾಡ್ಗಿಳ್ ಹಾಗೂ ರಫಿ ಅಹ್ಮದ್ ಕಿದ್ವಾಯಿ ಕೂಡ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ನಾಲ್ಕು ವಾರಗಳ ಬಳಿಕ ಕೆ.ಸಿ. ನಿಗೋಯ್ ಹಾಗೂ ಗೋಪಾಲಸ್ವಾಮಿ ಅಯ್ಯಂಗಾರ್ ಪ್ರಮಾಣ ವಚನ ಸ್ವೀಕರಿಸಿದರು. ಅಂತಹ ಅದ್ಭುತ ವ್ಯಕ್ತಿಗಳಿಂದ ತುಂಬಿ ತುಳುಕುತ್ತಿದ್ದ ಸಂಪುಟ ಅದಾಗಿತ್ತು ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಕಳೆದ ರಾತ್ರಿ ರಾಷ್ಟ್ರವನ್ನು ಉದ್ದೇಶಿಸಿ ರಾಷ್ಟ್ರಪತಿ ಮಾತನಾಡಿದ ಸಂದರ್ಭ ಸ್ವಾತಂತ್ರ್ಯ ಹೋರಾಟದ ಹಲವು ಅಪ್ರತಿಮ ವ್ಯಕ್ತಿಗಳನ್ನು ಉಲ್ಲೇಖಿಸುವಾಗ ಭಾರತದ ಮೊದಲ ಪ್ರಧಾನಿ, ಬ್ರಿಟೀಷರ ಕಾರಾಗೃಹದಲ್ಲಿ 10 ವರ್ಷ ಕಳೆದ ಜವಾಹರ್ ಲಾಲ್ ನೆಹರೂ ಅವರನ್ನು ಉಲ್ಲೇಖಿಸದೇ ಇರುವುದು ದುರಾದೃಷ್ಟಕರ ಎಂದು ಅವರು ‘ಎಕ್ಸ್’ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.