“ ನ್ಯಾಯಾಲಯದ ಅನುಮೋದಯಿಲ್ಲದೆ ಇನ್ನು ಅತ್ಯಾಚಾರ ಅಪರಾಧಿ ರಾಮ್ ರಹೀಂಗೆ ಪೆರೋಲ್ ಮಂಜೂರಾತಿಯಿಲ್ಲ”
ಚಂಡೀಗಢ : 20 ವರ್ಷದ ಕಾರಾಗೃಹ ಶಿಕ್ಷೆ ಅನುಭವಿಸಬೇಕಾದ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಹಾಗೂ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಂಗೆ ಪದೇ ಪದೇ ಪೆರೋಲ್ ಮಂಜೂರು ಮಾಡುತ್ತಿರುವ ಕುರಿತು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಪ್ರಶ್ನೆಗಳನ್ನೆತ್ತಿದೆ. ಕಳೆದ ಜನವರಿಯಲ್ಲಿ ಅತ್ಯಾಚಾರ ಅಪರಾಧಿಯಾದ ಗುರ್ಮೀತ್ ರಾಮ್ ರಹೀಂಗೆ 50 ದಿನಗಳ ಪೆರೋಲ್ ಅನ್ನು ಮಂಜೂರು ಮಾಡಲಾಗಿತ್ತು. ಇದು ಕಳೆದ ಹತ್ತು ತಿಂಗಳಲ್ಲಿ ಏಳನೆಯ ಪೆರೋಲ್ ಆಗಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಒಂಭತ್ತನೆಯ ಪೆರೋಲ್ ಆಗಿದೆ.
ಪೆರೋಲ್ ಅವಧಿ ಮುಕ್ತಾಯವಾಗುವ ಮಾರ್ಚ್ 10ರಂದು ರಾಮ್ ರಹೀಂ ಶರಣಾಗುವುದನ್ನು ಖಾತರಿಪಡಿಸಬೇಕು ಎಂದು ಹರ್ಯಾಣ ಸರಕಾರಕ್ಕೆ ಸೂಚಿಸಿರುವ ಹೈಕೋರ್ಟ್, ಮುಂದಿನ ಬಾರಿ ರಾಮ್ ರಹೀಂಗೆ ಪೆರೋಲ್ ಮಂಜೂರು ಮಾಡಲು ನ್ಯಾಯಾಲಯದ ಅನುಮತಿಗೆ ಮನವಿ ಮಾಡಬೇಕು ಎಂದೂ ಆದೇಶಿಸಿತು.
ಹರ್ಯಾಣ ಸರಕಾರಕ್ಕೆ ಈ ಹಿನ್ನಡೆಯೊಂದಿಗೆ, ಈ ಬಗೆಯಲ್ಲಿ ಎಷ್ಟು ಮಂದಿಗೆ ರಾಜ್ಯ ಸರಕಾರವು ಪೆರೋಲ್ ಮಂಜೂರು ಮಾಡಿದೆ ಎಂಬ ಕುರಿತು ತನಗೆ ಮಾಹಿತಿ ಒದಗಿಸಬೇಕು ಎಂದೂ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಆದೇಶಿಸಿದೆ. ಎಸ್ಜಿ ಪಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಈ ಆದೇಶವನ್ನು ನೀಡಿದೆ.
ಮಾಜಿ ಡೇರಾ ಮುಖ್ಯಸ್ಥ ಶಾ ಸತ್ನಂ ಜನ್ಮದಿನಾಚರಣೆಯಲ್ಲಿ ಭಾಗಿಯಾಗಲು ರಾಮ್ ರಹೀಂಗೆ ನವೆಂಬರ್ ತಿಂಗಳಲ್ಲಿ 21 ದಿನ, ಜುಲೈನಲ್ಲಿ 30 ದಿನ ಹಾಗೂ ಜನವರಿಯಲ್ಲಿ 40 ದಿನ ಸೇರಿ ಒಟ್ಟು 91 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಪದೇ ಪದೇ ಮಂಜೂರು ಮಾಡಲಾಗುತ್ತಿರುವ ಪೆರೋಲ್ ಕುರಿತು ಪ್ರಶ್ನೆ ಎತ್ತಿದ ಹೈಕೋರ್ಟ್, ಎಷ್ಟು ಮಂದಿ ಕೈದಿಗಳು ಪೆರೋಲ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ ಹಾಗೂ ಎಷ್ಟು ಮಂದಿ ಕೈದಿಗಳ ಪೆರೋಲ್ ಅರ್ಜಿಯನ್ನು ಅಂಗೀಕರಿಸಲಾಗಿದೆ ಎಂಬ ಕುರಿತು ತನಗೆ ಮಾಹಿತಿ ನೀಡಬೇಕು ಎಂದು ಹರ್ಯಾಣ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಅತ್ಯಾಚಾರ ಅಪರಾಧಿಗಳಿಗೆ ನೀಡಲಾಗಿರುವ ಸವಲತ್ತು ಹಾಗೂ ಎಷ್ಟು ಮಂದಿ ಕೈದಿಗಳು ಇಂತಹ ಸವಲತ್ತನ್ನು ಸ್ವೀಕರಿಸಿದ್ದಾರೆ ಎಂಬ ಕುರಿತು ತನಗೆ ಮಾಹಿತಿ ಒದಗಿಸುವಂತೆಯೂ ಹರ್ಯಾಣ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಬಂಧಿತರಾಗಿದ್ದ ರಾಮ್ ರಹೀಂ ಸಿಂಗ್ ಅವರನ್ನು ಆಗಸ್ಟ್ 2017ರಲ್ಲಿ ದೋಷಿ ಎಂದು ಹರ್ಯಾಣದ ಪಂಚಕುಲದಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯ ಘೋಷಿಸಿತ್ತು.