ಮಧ್ಯಪ್ರದೇಶದ ಭೋಜಶಾಲಾ-ಕಮಾಲ್ ಮಸೀದಿ ಸಂಕೀರ್ಣದಲ್ಲಿ ಎಎಸ್‌ಐ ಭೌತಿಕ ಉತ್ಖನನ ನಡೆಸುವಂತಿಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಮಧ್ಯಪ್ರದೇಶದ ಭೋಜಶಾಲಾ ದೇವಸ್ಥಾನ-ಕಮಾಲ್ ಮೌಲಾ ಮಸೀದಿ ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ( ಎಎಸ್‌ಐ) ಇಲಾಖೆಯು ಯಾವುದೇ ಭೌತಿಕ ಉತ್ಖನನವನ್ನು ನಡೆಸಬಾರದು ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಆದೇಶಿಸಿದೆ.
ಸಂಕೀರ್ಣದಲ್ಲಿ ಸರ್ವೆ ನಡೆಸಲು ಎಎಸ್‌ಐಗೆ ನಿರ್ದೇಶನ ನೀಡಿರುವ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ವಿವಾದಿತ ಸ್ಥಳ ‘ಭೋಜಶಾಲಾ ಮತ್ತು ಕಮಾಲ್ ಮೌಲಾ ಮಸೀದಿ’ ಸಂಕೀರ್ಣದಲ್ಲಿ ಸಮೀಕ್ಷೆ ನಡೆಸುವಂತೆ ಎಎಸ್‌ಐಗೆ ನಿರ್ದೇಶನ ನೀಡಿರುವ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಹೊರಡಿಸಿದ ಸರ್ವೋಚ್ಚ ನ್ಯಾಯಾಲಯವು, ತನ್ನ ಅನುಮತಿಯಿಲ್ಲದೆ ಎಎಸ್‌ಐ ಸಮೀಕ್ಷೆಯ ಫಲಿತಾಂಶದ ಆಧಾರದಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು ಎಂದು ಮಧ್ಯಂತರ ಆದೇಶದಲ್ಲಿ ತಿಳಿಸಿದೆ.
ಸಂಕೀರ್ಣದ ಆವರಣದ ಸ್ವರೂಪವನ್ನು ಬದಲಿಸುವ ಯಾವುದೇ ಭೌತಿಕ ಉತ್ಖನನವನ್ನು ನಡೆಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.