ನೀಟ್-ಯುಜಿ ಪರೀಕ್ಷೆಯ ಪಾವಿತ್ರ್ಯತೆಯಲ್ಲಿ ಯಾವುದೇ ವ್ಯವಸ್ಥಿತ ಸೋರಿಕೆಯಾಗಿಲ್ಲ : ಸುಪ್ರೀಂ ಕೋರ್ಟ್
ಹೊಸದಿಲ್ಲಿ: 2024ನೇ ಸಾಲಿನ ನೀಟ್-ಯುಜಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಹಾಗೂ ಪರೀಕ್ಷೆಯ ಪಾವಿತ್ರ್ಯದಲ್ಲಿ ವ್ಯವಸ್ಥಿತ ಸೋರಿಕೆಯಾಗಿದೆ ಎಂಬ ತೀರ್ಮಾನಕ್ಕೆ ಬರಲು ಯಾವುದೇ ಸಾಕ್ಷ್ಯವಿಲ್ಲ ಎಂದು ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಇನ್ನಿತರ ಅಕ್ರಮಗಳ ಆಧಾರದಲ್ಲಿ ಮರು ಪರೀಕ್ಷೆ ನಡೆಸಬೇಕು ಎಂದು ಮನವಿ ಮಾಡಿದ್ದ ಅರ್ಜಿಗಳನ್ನು ವಜಾಗೊಳಿಸುವುದಕ್ಕೂ ಮುನ್ನ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿತು.
ವಿವಾದಾತ್ಮಕ ನೀಟ್-ಯುಜಿ ಪರೀಕ್ಷೆಯನ್ನು ರದ್ದುಗೊಳಿಸಬೇಕು ಹಾಗೂ ಮರು ಪರೀಕ್ಷೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಜೂನ್ 23ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಈ ಆದೇಶದ ಪ್ರತಿಯು ಬುಧವಾರ (ಜೂನ್ 24) ರಾತ್ರಿ ಸುಪ್ರೀಂ ಕೋರ್ಟ್ ಅಂತರ್ಜಾಲ ತಾಣದಲ್ಲಿ ಅಪ್ಲೋಡ್ ಆಗಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೀಡಿರುವ 14 ಪುಟಗಳ ಮಧ್ಯಂತರ ತೀರ್ಪಿನಲ್ಲಿ, “ಸದ್ಯದ ಹಂತದಲ್ಲಿ, ಸಂಪೂರ್ಣ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಅಥವಾ ಪರೀಕ್ಷೆಯ ಪಾವಿತ್ರ್ಯದಲ್ಲಿ ವ್ಯವಸ್ಥಿತ ಸೋರಿಕೆಯಾಗಿದೆ ಎಂಬುದಕ್ಕೆ ಸಾಕ್ಷ್ಯಗಳ ಕೊರತೆ ಇದೆ ಎಂಬ ತೀರ್ಮಾನಕ್ಕೆ ಬರಲಾಗಿದೆ” ಎಂದು ಹೇಳಲಾಗಿದೆ.
ಇದೇ ವಿಷಯದ ಕುರಿತು ಸಲ್ಲಿಕೆಯಾಗಿರುವ ಇನ್ನುಳಿದ ಸುಮಾರು 40 ಅರ್ಜಿಗಳ ಕುರಿತ ವಿಸ್ತೃತ ಹಾಗೂ ಕಾರಣಸಹಿತ ತೀರ್ಪನ್ನು ಮುಂದೆ ಪ್ರಕಟಿಸಲಾಗುತ್ತದೆ.
ನ್ಯಾ. ಜೆ.ಬಿ.ಪಾರ್ದಿವಾಲಾ ಹಾಗೂ ನ್ಯಾ. ಮನೋಜ್ ಮಿಶ್ರಾ ರನ್ನೂ ಒಳಗೊಂಡಿದ್ದ ನ್ಯಾಯಪೀಠವು, “ನಗರವಾರು ಹಾಗೂ ಕೇಂದ್ರವಾರು ಸಲ್ಲಿಕೆಯಾಗಿರುವ ದಾಖಲೆಯಲ್ಲಿನ ದತ್ತಾಂಶಗಳು ಹಾಗೂ 2022, 2023 ಹಾಗೂ 2024ರ ದತ್ತಾಂಶದ ಹೋಲಿಕೆಯು ಪ್ರಶ್ನೆ ಪತ್ರಿಕೆಗಳು ವ್ಯವಸ್ಥಿತವಾಗಿ ಸೋರಿಕೆಯಾಗುವ ಮೂಲಕ ಪರೀಕ್ಷೆಯ ಪಾವಿತ್ರ್ಯತೆಯ ಮೇಲೆ ದುಷ್ಪರಿಣಾಮವುಂಟು ಮಾಡಿದೆ ಎಂಬುದನ್ನು ಸೂಚಿಸುತ್ತಿಲ್ಲ” ಎಂದು ಅಭಿಪ್ರಾಯ ಪಟ್ಟಿದೆ.
ಮರು ಪರೀಕ್ಷೆ ನಡೆಸುವುದಕ್ಕೆ ಆದೇಶಿಸುವುದರಿಂದ ಪರೀಕ್ಷೆಗೆ ಹಾಜರಾಗಿರುವ ಎರಡು ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಗಂಭೀರ ದುಷ್ಪರಿಣಾಮವುಂಟಾಗುತ್ತದೆ ಎಂದೂ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಇಂತಹ ಕ್ರಮವನ್ನು ಕೈಗೊಳ್ಳುವುದರಿಂದ ದಾಖಲಾತಿ ವೇಳಾಪಟ್ಟಿಯ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ, ಸಂಪೂರ್ಣ ಪ್ರಕ್ರಿಯೆಯನ್ನು ಹಲವಾರು ತಿಂಗಳ ಕಾಲ ಮುಂದೂಡುತ್ತದೆ ಹಾಗೂ ವೈದ್ಯಕೀಯ ಶಿಕ್ಷಣ ಪದವಿಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಇದಕ್ಕೂ ಮುಂಚಿನ ತೀರ್ಪುಗಳಲ್ಲಿ ಅಕ್ರಮಗಳ ಫಲಾನುಭವಿಗಳನ್ನು ನೈಜ ಯಶಸ್ವಿ ಅಭ್ಯರ್ಥಿಗಳಿಂದ ಬೇರ್ಪಡಿಸಲು ಸಾಧ್ಯರವಾಗದೆ ಹೋದ ಪಕ್ಷದಲ್ಲಿ ಮರು ಪರೀಕ್ಷೆಗೆ ಆದೇಶಿಸಬಹುದು ಎಂದು ಹೇಳಲಾಗಿತ್ತು.
ಎರಡು ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡಿರುವ ವಿವಾದದ ಕುರಿತು ನಿಶ್ಚಿತತೆ ಹಾಗೂ ಅಂತ್ಯವನ್ನು ಒದಗಿಸಲು ಮಧ್ಯಂತರ ಆದೇಶ ನೀಡುವುದು ಅಗತ್ಯವಾಯಿತು ಎಂದು ತೀರ್ಪಿನಲ್ಲಿ ಹೇಳಲಾಗಿದೆ.