ಕಲ್ಲು ತೂರಾಟಕ್ಕೆ ಬಳಸಿಕೊಂಡಿದ್ದಾರೆ ಎನ್ನಲಾದ ನೂಹ್ ನ ಹೊಟೇಲ್ ನೆಲಸಮ
ನೂಹ್: ಹರ್ಯಾಣದ ನೂಹ್ ಜಿಲ್ಲಾಡಳಿತ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯಾಚರಣೆಯನ್ನು ನಾಲ್ಕನೇ ದಿನವಾದ ರವಿವಾರ ಕೂಡ ಮುಂದುವರಿಸಿದ್ದು, ಇಲ್ಲಿ ಕಲ್ಲು ತೂರಾಟಕ್ಕೆ ಬಳಸಿಕೊಂಡಿದ್ದಾರೆ ಎನ್ನಲಾದ ಹೊಟೇಲ್ ಒಂದನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಿದೆ. ಇಲ್ಲಿನ ಸಹರಾ ಹೊಟೇಲ್ ನ ಛಾವಣಿಯಿಂದ ಕೆಲವು ವ್ಯಕ್ತಿಗಳು ಧಾರ್ಮಿಕ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಜುಲೈ 31ರಂದು ನೂಹ್ ನಲ್ಲಿ ಹಿಂಸಾಚಾರ ಆರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ‘‘ಅಧಿಕಾರಿಗಳು ವೀಡಿಯೊದಲ್ಲಿ ತೋರಿಸಿದ ಹೊಟೇಲ್ ನ ಕಟ್ಟಡ ನನಗೆ ಸೇರಿದ್ದಲ್ಲ. ಆ ಕಟ್ಟಡ ಸೋಹ್ನಾದಲ್ಲಿ ಇದೆ. ನಾನು ಕೂಡ ದೃಶ್ಯಾವಳಿಯನ್ನು ಅವರಿಗೆ ತೋರಿಸಿದ್ದೇನೆ. ಆದರೆ, ನನ್ನ ಮಾತು ಯಾರೂ ಆಲಿಸಲಿಲ್ಲ’’ ಎಂದು ರೆಸ್ಟೋರೆಂಟ್ ಮಾಲಕ ಜಮ್ಶೆದ್ ತಿಳಿಸಿದ್ದಾರೆ. ‘‘ನಾನು ಈ ರೆಸ್ಟೋರೆಂಟ್ ಅನ್ನು ಬಾಡಿಗೆಗೆ ಪಡೆದು ಕಳೆದ 9 ವರ್ಷಗಳಿಂದ ನಡೆಸುತ್ತಿದ್ದೇನೆ. ಆಡಳಿತ ಅನ್ಯಾಯ ಎಸಗುತ್ತಿದೆ. ನೂಹ್ ನಲ್ಲಿ ಘರ್ಷಣೆ ಆರಂಭವಾದಾಗ, ರೆಸ್ಟೋರೆಂಟ್ ಮುಚ್ಚುವಂತೆ ನಾನು ನನ್ನ ಕೆಲಸಗಾರರಿಗೆ ಸೂಚಿಸಿದ್ದೆ. ಅಲ್ಲದೆ, ನಾನು ಹಾಗೂ ನನ್ನ ಸಿಬ್ಬಂದಿ ಹೊಟೇಲ್ ನ ಹಿಂದೆ ಇರುವ ಕಾಲನಿಗೆ ತೆರಳಿದ್ದೆವು’’ ಎಂದು ಅವರು ತಿಳಿಸಿದ್ದಾರೆ.
ಹರಿಯಾಣದ ನೂಹ್ ನಲ್ಲಿ ಕೋಮು ಹಿಂಸಾಚಾರ ಮುಂದುವರಿದಿದ್ದು, ಆಗಸ್ಟ್ 8ರ ವರೆಗೆ ಇಂಟರ್ನೆಟ್, ಎಸ್ಎಂಎಸ್ ಸೇವೆ ಸ್ಥಗಿತವನ್ನು ಮುಂದುವರಿಸಿ ಸರಕಾರ ಆದೇಶ ಹೊರಡಿಸಿದೆ. ಪಲ್ಪಾಲಾ ಜಿಲ್ಲೆಯಲ್ಲಿ ಆಗಸ್ಟ್ 7ರ ಸಂಜೆ 5 ಗಂಟೆ ವರೆಗೆ ನಿರ್ಬಂಧ ಇರಲಿದೆ ಎಂದು ಆದೇಶ ತಿಳಿಸಿದೆ.