“ನಾಟ್ ಇನ್ ಅವರ್ ನೇಮ್!”: ಪ್ರಧಾನಿಯ ಕ್ರಿಸ್ಮಸ್ ಔತಣಕೂಟದಿಂದ ದೂರ ಸರಿದ 3,000ಕ್ಕೂ ಅಧಿಕ ಕ್ರೈಸ್ತರು
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 25, 2023ರಂದು ಆಯೋಜಿಸಿದ್ದ ಕ್ರಿಸ್ಮಸ್ ಔತಣಕೂಟದಲ್ಲಿ ಭಾಗವಹಿಸಿದ್ದ ಕ್ರೈಸ್ತ ಮುಖಂಡರಿಂದ ದೂರ ಸರಿದು ದೇಶಾದ್ಯಂತದ 3,000ಕ್ಕೂ ಅಧಿಕ ಕ್ರೈಸ್ತರು ಹೇಳಿಕೆಯೊಂದಕ್ಕೆ ಸಹಿ ಹಾಕಿದ್ದಾರೆ ಎಂದು thewire.in ವರದಿ ಮಾಡಿದೆ.
ಭಾರತದಲ್ಲಿ ಕ್ರೈಸ್ತರು 2014ರಿಂದೀಚೆಗೆ ಸತತ ದಾಳಿ ಹಾಗೂ ನಿಂದನೆಗೊಳಗಾಗಿದ್ದಾರೆ ಹಾಗೂ ಹಲವು ಬಿಜೆಪಿ ಆಡಳಿತದ ರಾಜ್ಯಗಳು ಜಾರಿಗೊಳಿಸಿರುವ ಮತಾಂತರ-ವಿರೋಧಿ ಕಾನೂನುಗಳನ್ನು ಸಮುದಾಯದ ವಿರುದ್ಧ ತಾರತಮ್ಯ ನಡೆಸಲು ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ.
ಮಣಿಪುರದಲ್ಲಿ ಮೇ 3, 2023ರಂದು ಆರಂಭಗೊಂಡ ಜನಾಂಗೀಯ ಸಂಘರ್ಷದಲ್ಲಿ ದೊಡ್ಡ ಸಂಖ್ಯೆಯ ಚರ್ಚುಗಳ ಮೇಲೆ ದಾಳಿ ನಡೆಸಲಾಗಿರುವುದನ್ನೂ ಹೇಳಿಕೆ ಉಲ್ಲೇಖಿಸಿದೆ.
“ಪ್ರಧಾನಿಯಾಗಿ ತಮಗಿಷ್ಟ ಬಂದವರ ಜೊತೆಗೆ ಔತಣಕೂಟ ಏರ್ಪಡಿಸಲು ಅವರಿಗೆ ಹಕ್ಕಿದೆಯಾದರೂ. ತಮ್ಮ ಆಡಳಿತಾವಧಿಯಲ್ಲಿ ಕ್ರೈಸ್ತರ ಮೇಲಿನ ಒಂದೇ ಒಂದು ದಾಳಿಯನ್ನು ಖಂಡಿಸದೇ ಇರುವ ಅವರು ಆಯೋಜಿಸಿರುವ ಈ ಔತಣಕೂಟದ ಉದ್ದೇಶವನ್ನು ಯಾರಾದೂ ಸಹಜವಾಗಿ ಪ್ರಶ್ನಿಸುತ್ತಾರೆ. ಅವರು ಈ ಸಂದರ್ಭ ಏಸು ಕ್ರಿಸ್ತನನ್ನು ಹಾಗೂ ಕ್ರೈಸ್ತ ಸಮುದಾಯದ ಸೇವೆಗಳನ್ನು ಶ್ಲಾಘಿಸಿದರೂ ಇಂದು ದೇಶದಲ್ಲಿ ಕ್ರೈಸ್ತರ ಪರಿಸ್ಥಿತಿಯ ಬಗ್ಗೆ ಯಾವುದೇ ಕಳವಳ ಅಥವಾ ಸಹಾನುಭೂತಿ ತೋರಿಸಿಲ್ಲ,” ಎಂದು ಜನವರಿ 4ರಂದು ಬಿಡುಗಡೆಗೊಳಿಸಲಾಗಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಕ್ರಿಸ್ಮಸ್ ಔತಣಕೂಟಕ್ಕೆ ಆಹ್ವಾನ ಪಡೆದವರು ಆಯ್ದ ಕೆಲ ಕ್ರೈಸ್ತರು. ಇದು ಪ್ರಧಾನಿಯ ಆಮಂತ್ರಣವಾಗಿದ್ದರೂ ಮಣಿಪುರ ಮತ್ತು ಇತರೆಡೆ ಕ್ರೈಸ್ತರು ಅನುಭವಿಸುತ್ತಿರುವ ಯಾತನೆಯ ಹಿನ್ನೆಲೆಯಲ್ಲಿ ಈ ಆಮಂತ್ರಣವನ್ನು ನಯವಾಗಿ ತಿರಸ್ಕರಿಸುವ ಅವಕಾಶ ಅವರಿಗಿತ್ತು. ಈ ಕ್ರೈಸ್ತ ಪ್ರತಿನಿಧಿಗಳು ಔತಣಕೂಟದಲ್ಲಿ ಭಾಗಿಯಾಗಿ ಮಾತನಾಡಿದಾಗ ಈ ಸರ್ಕಾರದ ಎಲ್ಲಾ ತಪ್ಪುಗಳಿಗೆ ಅವರು ಪರೋಕ್ಷವಾಗಿ ಒಪ್ಪಿಗೆ ನೀಡಿದ್ದಾರೆ. ಆದುದರಿಂದ ಅವರು ಈ ಆಮಂತ್ರಣವನ್ನು ಒಪ್ಪಿರುವುದು ನಮ್ಮ ಪರವಾಗಿ ಅಲ್ಲ (ನಾಟ್ ಇನ್ ಅವರ್ ನೇಮ್)!,” ಎಂದು ಹೇಳಿಕೆ ತಿಳಿಸಿದೆ.