"ತಿನ್ನಲು ಏನೂ ಇಲ್ಲ, 20 ವರ್ಷಗಳ ನಂತರ ಈ ಸ್ಥಿತಿ ಬಂದಿದೆ": ಗುಜರಾತ್ ಪ್ರವಾಹ ಸಂತ್ರಸ್ತರ ಅಳಲು

Update: 2024-08-28 15:58 GMT

    ಸಾಂದರ್ಭಿಕ ಚಿತ್ರ | PC : PTI


ವಡೋದರಾ: ಭಾರೀ ಮಳೆಯ ನಂತರ ಗುಜರಾತ್‌ನ ವಡೋದರಾ ಮತ್ತು ರಾಜ್ಯದ ಇತರ ನಗರಗಳು ಮತ್ತು ಹಳ್ಳಿಗಳ ಅನೇಕ ಪ್ರದೇಶಗಳು ಎರಡನೇ ದಿನವೂ ಜಲಾವೃತವಾಗಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸೇನೆಯನ್ನು ಕರೆಸಲಾಗಿದೆ.

ಕೆಲವು ಪ್ರದೇಶಗಳು 10 ರಿಂದ 12 ಅಡಿಗಳಷ್ಟು ನೀರಿನ ಅಡಿಯಲ್ಲಿವೆ ಎಂದು ಆರೋಗ್ಯ ಸಚಿವ ಮತ್ತು ಸರ್ಕಾರದ ವಕ್ತಾರ ರುಶಿಕೇಶ್ ಪಟೇಲ್ ಹೇಳಿದ್ದಾರೆ.

ಮೂರು ದಿನಗಳಲ್ಲಿ 15 ಜನರು ಪ್ರವಾಹದಲ್ಲಿ ಸಾವನ್ನಪ್ಪಿದ್ದಾರೆ ಎಂದು ಗಾಂಧಿನಗರ ಪರಿಹಾರ ಆಯುಕ್ತ ಅಲೋಕ್ ಪಾಂಡೆ ತಿಳಿಸಿದ್ದಾರೆ. 6,440 ಜನರನ್ನು ತಗ್ಗು ಪ್ರದೇಶದಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ.

ವಡೋದರಾದಲ್ಲಿ ಪ್ರವಾಹ ನೀರಿನಿಂದ ಸುತ್ತುವರಿದಿರುವ ತನ್ನ ಮನೆಯ ಮುಂಭಾಗದಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಎರಡು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದೆ ಎಂದು ಹೇಳಿದರು.

"ನಾವು ಹೊರಗೆ ಹೋಗಲೂ ಆಗುತ್ತಿಲ್ಲ, ಸರಿಯಾಗಿ ಊಟವನ್ನೂ ಮಾಡಿಲ್ಲ. ನಮಗೆ ಪರಿಹಾರ ಸಾಮಗ್ರಿ ಕೊಡಲು ಯಾರೂ ಬಂದಿಲ್ಲ. ನನ್ನ ತಂದೆ ನಡೆಯಲು ಸಾಧ್ಯವಿಲ್ಲ, ಅವರೂ ಊಟ ಮಾಡಿಲ್ಲ. ರಾತ್ರಿಯಿಡೀ ಇಲ್ಲಿಯೇ ಕುಳಿತಿದ್ದೇವೆ. ನಿದ್ರಿಸಲು ಸಾಧ್ಯವಿಲ್ಲ," ಎಂದು ಮಹಿಳೆ ಅವಲತ್ತುಕೊಂಡರು. ಮನೆಯ ಹೊರಗಿನ ಶೌಚಾಲಯಕ್ಕೆ ಹೋಗಲು ಅವರು ಪ್ರವಾಹದ ನೀರಿನಲ್ಲಿ ನಡೆದುಕೊಂಡು ಹೋಗಬೇಕಾಗಿದೆ ಎಂದು ಅವರು ಹೇಳಿದರು ಎಂದು NDTV ವರದಿ ಮಾಡಿದೆ.

ನೀರಿನ ಮಟ್ಟವು ಮೊಣಕಾಲಿನವರೆಗೆ ತಲುಪಿದ ಮತ್ತೊಂದು ಮನೆಯಲ್ಲಿರುವ, ನಿವಾಸಿ ತೇಜಲ್ ಅವರು, "ನಾವು ರಾತ್ರಿಯಿಡೀ ಇಲ್ಲಿಯೇ ಕುಳಿತಿದ್ದೇವೆ. ನನಗೆ ಮೂವರು ಚಿಕ್ಕ ಮಕ್ಕಳಿದ್ದಾರೆ. ಮಕ್ಕಳನ್ನು ನನ್ನ ತಾಯಿಯ ಮನೆಗೆ ಕಳುಹಿಸಬೇಕು. ಇಲ್ಲಿ ತಿನ್ನಲು ಏನೂ ಇಲ್ಲ. ನಾವು ಏನು ಮಾಡಬೇಕು. ಮಕ್ಕಳನ್ನು ನೋಡಿ ತುಂಬಾ ದುಃಖವಾಗುತ್ತಿದೆ" ಎಂದು ಕಣ್ಣೀರಾದರು.

ವಿಶ್ವಾಮಿತ್ರಿ ನದಿಗೆ ಪ್ರವಾಹದ ನೀರನ್ನು ಬಿಡುವ ಬದಲು ನರ್ಮದಾ ಕಾಲುವೆಗೆ ಹರಿಸುವುದು ರಾಜ್ಯ ಸರ್ಕಾರ ದೀರ್ಘಾವಧಿಯ ಯೋಜನೆಯಾಗಿದೆ ಎಂದು ರುಶಿಕೇಶ್ ಪಟೇಲ್ ಹೇಳಿದರು.

''ಸುಮಾರು 20 ವರ್ಷಗಳ ನಂತರ ಇಂತಹ ಪರಿಸ್ಥಿತಿ ಉಂಟಾಗಿದ್ದು, ಅಜ್ವಾ, ಪ್ರತಾಪುರ ಹಾಗೂ ಇತರ ಮೂರು ನಾನ್ ಗೇಟ್ ಜಲಾಶಯಗಳಿಂದ ವಿಶ್ವಾಮಿತ್ರಿ ನದಿಗೆ ನೀರು ಬರುತ್ತಿದೆ. ಪ್ರವಾಹಕ್ಕೆ ದೀರ್ಘಾವಧಿ ಪರಿಹಾರವಾಗಿ ಅಣೆಕಟ್ಟೆ ನೀರನ್ನು ಬಿಡುವ ಬದಲು ನರ್ಮದಾ ಕಾಲುವೆಗೆ ತಿರುಗಿಸಲು ನಾವು ಯೋಚಿಸುತ್ತಿದ್ದೇವೆ. ವಿಶ್ವಾಮಿತ್ರಿ ಯೋಜನೆ ಕುರಿತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಚರ್ಚಿಸಲಾಗಿದೆ" ಎಂದು ಅವರು ಹೇಳಿದರು.

"ವಡೋದರದಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದೆ. ನದಿಯ ಎರಡೂ ಬದಿಗಳಲ್ಲಿ ಇನ್ನೂ ಅನೇಕ ಪ್ರದೇಶಗಳಲ್ಲಿ 10 ರಿಂದ 12 ಅಡಿಗಳಷ್ಟು ನೀರಿವೆ. ಕೆಲವು ಪ್ರದೇಶಗಳಲ್ಲಿ ನಾಲ್ಕರಿಂದ ಐದು ಅಡಿಗಳಷ್ಟು ನೀರಿದೆ. ಸ್ಥಳೀಯ ಆಡಳಿತವು 5,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಪ್ರವಾಹದಲ್ಲಿ ಸಿಕ್ಕಿಬಿದ್ದ ಸುಮಾರು 1,200 ಜನರನ್ನು ರಕ್ಷಿಸಲಾಗಿದೆ" ಎಂದು ಪಟೇಲ್ ಹೇಳಿದರು.

ಭಾರೀ ಮಳೆ ಮತ್ತು ಅಜ್ವಾ ಅಣೆಕಟ್ಟಿನಿಂದ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ವಿಶ್ವಾಮಿತ್ರಿ ನದಿ ಮಂಗಳವಾರ ಬೆಳಿಗ್ಗೆ 25 ಅಡಿ ಅಪಾಯದ ಗಡಿ ದಾಟಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News