ಆಸ್ಕರ್ ಪುರಸ್ಕೃತ ನಟಿಯ ಮನೆ ಕೆಡವಲು ನೋಟಿಸ್!

Update: 2023-09-30 17:03 GMT

                                                                                          Photo: India Today

ಮಿರ್ಜಾಪುರ : ತನ್ನ ಜೀವನದ ಆಧಾರಿತ 2008ರ ಆಸ್ಕರ್ ಪ್ರಶಸ್ತಿ ಪುರಸ್ಕೃತ ʼಸ್ಮೈಲ್ ಪಿಂಕಿʼ ಸಾಕ್ಷ್ಯಚಿತ್ರದಿಂದಾಗಿ ಪ್ರಸಿದ್ಧಿ ಪಡೆದಿದ್ದ ಪಿಂಕಿ ಸೋನ್ಕರ್ ಅವರ ಇಲ್ಲಿಯ ನಿವಾಸವನ್ನು ನೆಲಸಮಗೊಳಿಸಲು ಉತ್ತರ ಪ್ರದೇಶ ಅರಣ್ಯ ಇಲಾಖೆಯು ನೋಟಿಸು ಹೊರಡಿಸಿದೆ. ಆರು ವರ್ಷ ಪ್ರಾಯದಲ್ಲಿ ಸಾಕ್ಷ್ಯಚಿತ್ರದಲ್ಲಿ ನಟಿಸಿದ್ದ ಪಿಂಕಿ ಸೋನ್ಕರ್ ಈಗ 20ರ ಹರೆಯದಲ್ಲಿದ್ದಾರೆ.

ಮಿರ್ಜಾಪುರ ಜಿಲ್ಲೆಯ ರಾಮಪುರ ಧಾಭಿ ಗ್ರಾಮದ ನಿವಾಸಿಯಾಗಿರುವ ಪಿಂಕಿ ಜೊತೆಗೆ 30ಕ್ಕೂ ಅಧಿಕ ಗ್ರಾಮಸ್ಥರಿಗೆ ನೆಲಸಮ ನೋಟಿಸ್ ಗಳನ್ನು ಜಾರಿಗೊಳಿಸಲಾಗಿದ್ದು, ಅವರ ಮನೆಗಳು ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಅಕ್ರಮ ನಿರ್ಮಾಣಗಳಾಗಿವೆ ಎಂದು ನೋಟಿಸಿನಲ್ಲಿ ತಿಳಿಸಲಾಗಿದೆ.

ಪಿಂಕಿ ಮತ್ತು ಆಕೆಯ ತಂದೆ ರಾಜೇಂದ್ರ ಸೋನ್ಕರ್ ಪ್ರಕಾರ, ಗ್ರಾಮಸ್ಥರು ಮನೆಗಳನ್ನು ನಿರ್ಮಿಸುವಾಗ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಎನ್ನುವುದನ್ನು ಅವರಿಗೆ ತಿಳಿಸಿರಲಿಲ್ಲ. ಪಿಂಕಿಯ ಸಾಕ್ಷ್ಯಚಿತ್ರವು ಆಸ್ಕರ್ ಪ್ರಶಸ್ತಿಯನ್ನು ಗೆದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ತಮಗೆ ಈ ಜಮೀನು ನೀಡಿದ್ದರು ಎಂದು ನೋಟಿಸ್ ಸ್ವೀಕರಿಸಿರುವ ಗ್ರಾಮಸ್ಥರು ಹೇಳಿದ್ದಾರೆ.

ಇದು ಯಾವ ಬಗೆಯ ಜಮೀನು ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಪಿಂಕಿಯ ಮನೆಯ ಅಡಿಪಾಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳೇ ಸ್ವತಃ ತೋಡಿದ್ದರು. ಈಗ ಅದು ಅಕ್ರಮ ನಿರ್ಮಾಣ ಎಂದು ಅವರು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರ ಪರ ವಕೀಲ ಅನಿಲ ಪಾಲ್ ತಿಳಿಸಿದರು.

ಸೆ.21ರಂದು ಗ್ರಾಮಸ್ಥರಿಗೆ ನೋಟಿಸಗಳನ್ನು ಜಾರಿಗೊಳಿಸಲಾಗಿದ್ದು, ಸೆ.26ರೊಳಗೆ ಮನೆಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿತ್ತು.

ಆದರೆ ನೆಲಸಮ ನೋಟಿಸನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗಿದೆ ಮತ್ತು ನ್ಯಾಯಯುತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ನಿರಂಜನ ತಿಳಿಸಿದರು.

ಜನ್ಮದಿಂದಲೇ ಸೀಳ್ದುಟಿ ಸಮಸ್ಯೆಯನ್ನು ಹೊಂದಿದ್ದ ಪಿಂಕಿ ಸಾಮಾಜಿಕ ಕಾರ್ಯಕರ್ತರೋರ್ವರ ನೆರವಿನಿಂದ ಅದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗುವವರೆಗಿನ ಪಯಣವನ್ನು ಆಸ್ಕರ್ ಪುರಸ್ಕೃತ ʼಸ್ಮೈಲ್ ಪಿಂಕಿʼ ಸಾಕ್ಷ್ಯಚಿತ್ರವು ತೋರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News