ಭಾರತ್ ಜೋಡೊ ನ್ಯಾಯ ಯಾತ್ರೆ ವೇಳೆ ‘ಜೈ ಶ್ರೀರಾಮ್’, ‘ಮೋದಿ’ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು; ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು ಹೀಗೆ...
ನಾಗಾಂವ್ (ಅಸ್ಸಾಂ): ಬಿಜೆಪಿ ಕಾರ್ಯಕರ್ತರ ಗುಂಪೊಂದು ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಭಾರತ್ ಜೋಡೊ ನ್ಯಾಯ ಯಾತ್ರೆಯ ಬಸ್ ಮುಂದೆ ನಿಂತು ‘ಜೈ ಶ್ರೀರಾಮ್’, ‘ಮೋದಿ, ಮೋದಿ’ ಎಂಬ ಘೋಷಣೆಗಳನ್ನು ಕೂಗತೊಡಗಿದಾಗ, ರಾಹುಲ್ ಗಾಂಧಿ ಅವರತ್ತ ಕೈ ಬೀಸಿ, ʼಫ್ಲೈಯಿಂಗ್ ಕಿಸ್ʼ ನೀಡಿರುವುದಲ್ಲದೆ, ಅವರನ್ನು ಭೇಟಿಯಾಗಲು ಬಸ್ ನಿಂದ ಕೆಳಗಿಳಿದು ಬಂದಿದ್ದಾರೆ.
ಘಟನೆಯ ವಿಡಿಯೊವನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, “ನಮ್ಮ ಪ್ರೀತಿಯ ಅಂಗಡಿಯು ಎಲ್ಲೆಡೆ ತೆರೆದಿದೆ. ‘ಭಾರತವನ್ನು ಒಗ್ಗೂಡಿಸೋಣ, ಹಿಂದೂಸ್ತಾನವನ್ನು ಗೆಲ್ಲೋಣ’” ಎಂದು ಬರೆದುಕೊಂಡಿದ್ದಾರೆ.
ನಂತರ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಈ ಘಟನೆಯನ್ನು ನಿರೂಪಿಸಿ, ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿಯವರಿಗಾಗಲಿ ಅಥವಾ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರಿಗಾಗಲಿ ಹೆದರುವುದಿಲ್ಲ” ಎಂದು ಹೇಳಿದ್ದಾರೆ.
ಈ ನಡುವೆ, ಮಣಿಪುರದಿಂದ ಮಹಾರಾಷ್ಟ್ರದವರೆಗೆ ನಡೆಯುತ್ತಿರುವ ನ್ಯಾಯ ಯಾತ್ರೆಯ ಅಸ್ಸಾಂ ಹಂತದಲ್ಲಿ ಬಿಜೆಪಿ ಬೆಂಬಲಿಗರು ರಾಹುಲ್ ಗಾಂಧಿ ಹಾಗೂ ಜೈರಾಮ್ ರಮೇಶ್ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
सबके लिए खुली है मोहब्बत की दुकान,
— Rahul Gandhi (@RahulGandhi) January 21, 2024
जुड़ेगा भारत, जीतेगा हिंदुस्तान। pic.twitter.com/Bqae0HCB8f