ಒಡಿಶಾ | ಕೋಮು ಗಲಭೆ ಹರಡುವುದನ್ನು ತಡೆಯಲು 48 ಗಂಟೆ ಇಂಟರ್‌ನೆಟ್ ಸ್ಥಗಿತ

Update: 2024-09-28 15:13 GMT

PC : PTI

ಭದ್ರಕ್ (ಒಡಿಶಾ : ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ಸಂದೇಶಗಳಿಗೆ ಸಂಬಂಧಿಸಿ ಹಿಂಸಾತ್ಮಕ ಕೋಮು ಗಲಭೆಗಳು ಸಂಭವಿಸಿದ ಬಳಿಕ, ಒಡಿಶಾ ಸರಕಾರವು ಭದ್ರಕ್ ಜಿಲ್ಲೆಯಲ್ಲಿ ಸೆಪ್ಟಂಬರ್ 30ರವರೆಗೆ 48 ಗಂಟೆಗಳ ಕಾಲ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಭದ್ರಕ್ ಜಿಲ್ಲೆಯಲ್ಲಿ ವಾಟ್ಸ್‌ಆ್ಯಪ್, ಫೇಸ್‌ಬುಕ್, ಎಕ್ಸ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳನ್ನು ಇಂಟರ್‌ನೆಟ್ ಮತ್ತು ಡೇಟಾ ಸೇವೆಗಳ ಮೂಲಕ ಬಳಸುವುದರ ಮೇಲಿನ ನಿಷೇಧವನ್ನು ಸೆಪ್ಟಂಬರ್ 30ರ ಮುಂಜಾನೆ 2 ಗಂಟೆಯವರೆಗೆ 48 ಗಂಟೆಗಳ ಕಾಲ ವಿಸ್ತರಿಸಿ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸತ್ಯಬ್ರತ ಸಾಹು ಆದೇಶವೊಂದನ್ನು ಹೊರಡಿಸಿದ್ದಾರೆ.

‘‘ಸಾಮಾಜಿಕ ಮಾಧ್ಯಮಗಳ ಸಂದೇಶಗಳಿಂದಾಗಿ ಭದ್ರಕ್ ಮತ್ತು ಧರ್ಮನಗರ ಪ್ರದೇಶಗಳಲ್ಲಿ ಹಲವು ಕೋಮು ಗಲಭೆ ಘಟನೆಗಳು ಈ ಹಿಂದೆ ನಡೆದಿರುವುದು ರಾಜ್ಯ ಸರಕಾರದ ಗಮನಕ್ಕೆ ಬಂದಿದೆ. ಕೋಮು ಹಿಂಸೆಯನ್ನು ಹರಡುವುದಕ್ಕಾಗಿ ಇಂಟರ್‌ನೆಟ್‌ನ ದುರ್ಬಳಕೆಯಾಗಬಹುದು ಎಂಬ ಆತಂಕವನ್ನು ಜಿಲ್ಲಾಡಳಿತ ವ್ಯಕ್ತಪಡಿಸಿದೆ. ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಮತ್ತು ಆ ಮೂಲಕ ಭದ್ರಕ್ ಜಿಲ್ಲೆಯಲ್ಲಿ ಶಾಂತಿ ವ್ಯವಸ್ಥೆಯನ್ನು ಹದಗೆಡಿಸುವ ಕೃತ್ಯಗಳಿಗೆ ಕಾರಣವಾಗುವ ಸಾಮರ್ಥ್ಯವನ್ನು ವಾಟ್ಸ್‌ಆ್ಯಪ್, ಫೇಸ್‌ಬುಕ್, ಎಕ್ಸ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳು ಹೊಂದಿವೆ. ಹಾಗಾಗಿ, ಇಂಥ ಉದ್ವಿಗ್ನಕಾರಿ ಸಂದೇಶಗಳು ಮೇಲೆ ಹೇಳಲಾಗಿರುವ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವುದನ್ನು ತಡೆಯಲು ಹಾಗೂ ಶಾಂತಿ ಮತ್ತು ಸೌಹಾರ್ದವನ್ನು ಮರಳಿ ತರಲು ಇಂಟರ್‌ನೆಟ್‌ನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’’ ಎಂದು ಸರಕಾರಿ ಆದೇಶ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News