ಅಭಿಮನ್ಯುವನ್ನು ಚಕ್ರವ್ಯೂಹದೊಳಗೆ ಸಾಯಿಸಿದಂತೆ ಬಿಜೆಪಿ ಭಾರತವನ್ನು ಸಾಯಿಸುತ್ತಿದೆ: ರಾಹುಲ್ ಗಾಂಧಿ
ಹೊಸದಿಲ್ಲಿ: ಇಂದು ಲೋಕಸಭೆಯಲ್ಲಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ದೇಶದ ಪ್ರಸ್ತುತ ಸನ್ನಿವೇಶ ಮತ್ತು ಮಹಾಭಾರತದ ಚಕ್ರವ್ಯೂಹ ರಚನೆಯ ನಡುವೆ ಹೋಲಿಕೆ ಮಾಡಿದರು. “ಸಾವಿರಾರು ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ಆರು ಜನರು ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿ ಕೊಂದರು. ನಾನು ಸ್ವಲ್ಪ ಸಂಶೋಧನೆ ನಡೆಸಿದಾಗ ಈ ಚಕ್ರವ್ಯೂಹವನ್ನು ಪದ್ಮವ್ಯೂಹವೆಂದೂ ಕರೆಯುತ್ತಾರೆಂದು ಕಂಡುಕೊಂಡೆ.
21ನೇ ಶತಮಾನದಲ್ಲಿ ಹೊಸ ಚಕ್ರವ್ಯೂಹ ರಚನೆಯಾಗಿದೆ- ಅದು ಕೂಡ ಪದ್ಮದ ರೂಪದಲ್ಲಿ. ಪ್ರಧಾನಿ ಈ ತಾವರೆ ಚಿಹ್ನೆಯನ್ನು ತಮ್ಮ ಎದೆಯಲ್ಲಿ ಧರಿಸುತ್ತಾರೆ. ಅಭಿಮನ್ಯು ಜೊತೆ ಮಾಡಿದಂತೆ ಭಾರತದ ಜೊತೆ, ಅದರ ಯುವಜನತೆ, ರೈತರು, ಮಹಿಳೆಯರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕುರಿತಂತೆ ಮಾಡಲಾಗುತ್ತಿದೆ. ಇಂದು ಕೂಡ ಈ ಚಕ್ರವ್ಯೂಹದ ಹಿಂದೆ ಆರು ಜನರಿದ್ದಾರೆ- ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ,” ಎಂದು ರಾಹುಲ್ ಹೇಳಿದರು.
ನಂತರ ಸ್ಪೀಕರ್ ಓಂ ಬಿರ್ಲಾ ಮಧ್ಯಪ್ರವೇಶದ ನಂತರ ಕೆಲ ಹೆಸರುಗಳನ್ನು ಗಾಂಧಿ ಕೈಬಿಟ್ಟರೂ ಮೋದಿ, ಶಾ ಮತ್ತು ಭಾಗವತ್ ವಿರುದ್ಧದ ಟೀಕೆಯನ್ನು ಪುನರುಚ್ಛರಿಸಿದರು.
ಈ ವರ್ಷದ ಬಜೆಟ್ ತಯಾರಿಯಲ್ಲಿ ಭಾಗವಹಿಸಿದವರಲ್ಲಿ ಕೇವಲ ಇಬ್ಬರು ಅಲ್ಪಸಂಖ್ಯಾತ ಅಥವಾ ಒಬಿಸಿ ಸಮುದಾಯದವರಾಗಿದ್ದಾರೆ ಎಂದು ರಾಹುಲ್ ಹೇಳಿದರು.
ಬಜೆಟ್ ಅಧಿವೇಶನದ ಮುನ್ನ ವಿತ್ತ ಸಚಿವಾಲಯದಲ್ಲಿ ನಡೆಯುವ ಸಾಂಪ್ರದಾಯಿಕ ಹಲ್ವಾ ಸಮಾರಂಭದ ಚಿತ್ರದ ಪೋಸ್ಟರ್ ಪ್ರದರ್ಶಿಸಿದ ರಾಹುಲ್, ಈ ಫೋಟೋದಲ್ಲಿ ಬಜೆಟ್ ಕಾ ಹಲ್ವಾ ವಿತರಿಸಲಾಗುತ್ತಿದೆ. ಬಜೆಟ್ ತಯಾರಿಸಿದ 20 ಅಧಿಕಾರಿಗಳ ಪೈಕಿ ಇಬ್ಬರು ಮಾತ್ರ ಅಲ್ಪಸಂಖ್ಯಾತ ಸಮುದಾಯದವರು ಅತಥವಾ ಒಬಿಸಿಗಳಾಗಿದ್ದಾರೆ. ಅವರು ಚಿತ್ರದಲ್ಲಿ ಕಾಣಿಸುವುದೂ ಇಲ್ಲ. ದೇಶದ ಶೇ 73ರಷ್ಟು ಜನತೆಗೆ ಪ್ರಾತಿನಿಧ್ಯ ದೊರಕಿಲ್ಲ, 20 ಅಧಿಕಾರಿಗಳು ಬಜೆಟ್ ತಯಾರಿಸಿದ್ದರು ಆದರೆ ಫೋಟೋದಲ್ಲಿರುವ ಒಬ್ಬರು ಸಹ ಈ ಸಮುದಾಯಗಳವರಲ್ಲ,” ಎಂದು ರಾಹುಲ್ ಹೇಳಿದರು.
ಯುವಜನತೆಯನ್ನು ಕಾಡುತ್ತಿರುವ ನಿರುದ್ಯೋಗ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗಳ ಸಮಸ್ಯೆ ಪರಿಹರಿಸಲು ವಿಫಲವಾಗಿರುವ ಸರ್ಕಾರ ಸೈನಿಕರನ್ನು “ಅಗ್ನಿವೀರ್ ಚಕ್ರವ್ಯೂಹ”ದಲ್ಲಿ ಸಿಲುಕಿಸುತ್ತಿದೆ ಎಂದು ರಾಹುಲ್ ಹೇಳಿದರು.