ಮುಸ್ಲಿಂ ಸಮುದಾಯದ ವಿರುದ್ಧ ಪ್ರಧಾನಿ ಮೋದಿಯಿಂದಲೇ ದ್ವೇಷ ಭಾಷಣ: ವಿಪಕ್ಷಗಳ ಖಂಡನೆ

Update: 2024-04-22 06:18 GMT

ಪ್ರಧಾನಿ ನರೇಂದ್ರ ಮೋದಿ (Screengrab:X/@zoo_bear)

ಹೊಸದಿಲ್ಲಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಾಗರಿಕರ ಆಸ್ತಿಯನ್ನು”ನುಸುಳುಕೋರರಿಗೆ” ಹಂಚಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ತಮ್ಮು ಚುನಾವಣಾ ರ್ಯಾಲಿಯೊಂದರಲ್ಲಿ ಹೇಳಿರುವುದು ದ್ವೇಷದ ಭಾಷಣ ಎಂದು ವಿಪಕ್ಷ ನಾಯಕರು ಟೀಕಿಸಿದ್ದಾರೆ.

ರವಿವಾರ ರಾಜಸ್ಥಾನದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಮೋದಿ, “ಕಾಂಗ್ರೆಸ್‌ ಪ್ರಣಾಳಿಕೆಯು ತಾಯಂದಿರು ಮತ್ತು ಸಹೋದರಿಯರು ಹೊಂದಿರುವ ಚಿನ್ನವನ್ನು ಲೆಕ್ಕ ಹಾಕುವ ಬಗ್ಗೆ ಮಾತನಾಡಿದೆ, ಹೀಗೆ ಮಾಹಿತಿ ಸಂಗ್ರಹಿಸಿ ಅದನ್ನು ಹಂಚಲಿದೆ” ಎಂದು ಪ್ರಧಾನಿ ಹೇಳಿದ್ದರು.

“ಕಾಂಗ್ರೆಸ್-ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದಾಗ. ದೇಶದ ಸಂಪನ್ಮೂಲಗಳಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದಿದ್ದರು. ಅಂದರೆ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಮತ್ತು ನುಸುಳುಕೋರರಿಗೆ ಅವರು ಆ ಸಂಪತ್ತನ್ನು ಹಂಚಲಿದ್ದಾರೆ. ಇದು ನಿಮಗೆ ಒಪ್ಪಿಗೆಯೇ?” ಎಂದು ಅವರು ಪ್ರಶ್ನಿಸಿದರು.

“ಈ ಅರ್ಬನ್‌ ನಕ್ಸಲ್‌ ಚಿಂತನೆ ನಮ್ಮ ತಾಯಂದಿರ ಮತ್ತು ಸಹೋದರಿಯರ ಮಂಗಲಸೂತ್ರವನ್ನೂ ಬಿಟ್ಟುಬಿಡುವುದಿಲ್ಲ,” ಎಂದು ಮೋದಿ ಹೇಳಿದರು.

“ಮುಸ್ಲಿಮರಿಗೆ ಸಂಪನ್ಮೂಲಗಳಲ್ಲಿ ಮೊದಲ ಹಕ್ಕು ಇರಬೇಕು” ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಹೇಳುವ ಭಾಷಣದ ತುಣುಕೊಂದನ್ನು ಬಿಜೆಪಿ ಶೇರ್‌ ಮಾಡಿದರೆ, ಕಾಂಗ್ರೆಸ್‌ ನಾಯಕ ಮನೀಶ್‌ ತಿವಾರಿ ಇದಕ್ಕೆ ತಿರುಗೇಟು ನೀಡಿ, ಮನಮೋಹನ್‌ ಸಿಂಗ್‌ ಆ ಸಂದರ್ಭದಲ್ಲಿ ಮಾಡಿದ ಭಾಷಣದ ಸಂಪೂರ್ಣ ಪಠ್ಯವನ್ನು ನೀಡಿ, ಬಿಜೆಪಿ ಕೇವಲ ಒಂದು ತುಣುಕನ್ನು ಬಳಸಿಕೊಂಡು ಅರ್ಥವನ್ನು ತಿರುಚುವ ಯತ್ನ ಮಾಡಿದೆ ಎಂದು ಹೇಳಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಸಂಪತ್ತು ಹಂಚಲಾಗುವುದು ಎಂದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಲಾಗಿರುವುದನ್ನು ಬೊಟ್ಟು ಮಾಡುವಂತೆ ಕಾಂಗ್ರೆಸ್‌ ಪ್ರಧಾನಿಗೆ ಸವಾಲು ಹಾಕಿದೆ.

“ಮೋದೀ ಜಿ ನೀಡಿರುವುದು ದ್ವೇಷದ ಭಾಷಣ ಮತ್ತು ಗಮನವನ್ನು ಬೇರೆಡೆ ಸೆಳೆಯುವ ತಂತ್ರ,” ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

“ಅಧಿಕಾರ ಪಡೆಯಲು ಸುಳ್ಳು ಹೇಳುವುದು, ಆಧಾರರಹಿತ ಉಲ್ಲೇಖಗಳನ್ನು ಮಾಡುವುದು ಹಾಗೂ ಎದುರಾಳಿಗಳ ವಿರುದ್ಧ ಸುಳ್ಳು ಆರೋಪ ಹೊರಿಸುವುದು ಆರೆಸ್ಸೆಸ್‌ ಮತ್ತು ಬಿಜೆಪಿಯ ತರಬೇತಿಯ ವಿಶೇಷತೆಯಾಗಿದೆ,” ಎಂದು ಖರ್ಗೆ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್‌ ನಾಯಕರಾದ ಸಾಗರಿಕಾ ಘೋಷ್‌, ಸಾಕೇತ್‌ ಗೋಖಲೆ, ಎಐಎಂಐಎಂ ಅಧ್ಯಕ್ಷ ಅಸದುದ್ದೀನ್‌ ಉವೈಸಿ ಮತ್ತಿತರ ನಾಯಕರೂ ಪ್ರಧಾನಿ ಹೇಳಿಕೆ ಖಂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News