100ಕ್ಕೂ ಅಧಿಕ ಕೆಮ್ಮಿನ ಔಷಧಿ ಕಂಪನಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ: ವರದಿ
ಹೊಸದಿಲ್ಲಿ: ಭಾರತದಾದ್ಯಂತ 100ಕ್ಕೂ ಅಧಿಕ ಔಷಧಿ ತಯಾರಿಕೆ ಕಂಪನಿಗಳಿಂದ ಸಂಗ್ರಹಿಸಲಾದ ಕೆಮ್ಮಿನ ಸಿರಪ್ ಸ್ಯಾಂಪಲ್‌ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿವೆ ಎಂದು ಸರಕಾರಿ ವರದಿಯೊಂದು ತಿಳಿಸಿದೆ.
ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ(ಸಿಡಿಎಸ್‌ಸಿಒ)ಯು ಕೆಮ್ಮಿನ ಸಿರಪ್‌ನ 7,087 ಬ್ಯಾಚ್‌ಗಳನ್ನು ವಿಶ್ಲೇಷಿಸಿದ್ದು ಈ ಪೈಕಿ 353ನ್ನು ‘ಪ್ರಮಾಣಿತ ಗುಣಮಟ್ಟದ್ದಲ್ಲ’ ಎಂದು ಪಟ್ಟಿ ಮಾಡಲಾಗಿದೆ. ಇವು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಳ್ಳಲು ಕಾರಣಗಳಲ್ಲಿ ಈ ಹಿಂದೆ ಗಾಂಬಿಯಾ, ಉಝ್ಬೆಕಿಸ್ತಾನ್ ಮತ್ತು ಕ್ಯಾಮರೂನ್‌ಗಳಲ್ಲಿ ಮಕ್ಕಳ ಸಾವುಗಳೊಂದಿಗೆ ಗುರುತಿಸಿಕೊಂಡಿದ್ದ ಕೆಮ್ಮಿನ ಸಿರಪ್‌ಗಳಲ್ಲಿದ್ದ ವಿಷಕಾರಿಗಳ ಉಪಸ್ಥಿತಿಯು ಒಂದಾಗಿದೆ. ಒಂಭತ್ತು ಬ್ಯಾಚ್‌ಗಳಲ್ಲಿ ಡೈಎಥೆಲಿನ್ ಗ್ಲೈಕಾಲ್ ಅಥವಾ ಎಥೆಲಿನ್ ಗ್ಲೈಕಾಲ್ ಪತ್ತೆಯಾಗಿದ್ದು,ಇವು ವಾಂತಿ, ಸೆಳವುಗಳು, ರಕ್ತಪರಿಚಲನೆ ವ್ಯವಸ್ಥೆಯಲ್ಲಿ ಸಮಸ್ಯೆಗಳು ಮತ್ತು ತೀವ್ರ ಮೂತ್ರಪಿಂಡ ವೈಫಲ್ಯಗಳನ್ನುಂಟು ಮಾಡಬಲ್ಲವು. ಸಿಡಿಎಸ್‌ಸಿಒ ಈ ಬ್ಯಾಚ್‌ಗಳು ಇವೆರಡೂ ವಿಷಕಾರಿಗಳನ್ನು ಒಳಗೊಂಡಿರಲು ಅಸುರಕ್ಷಿತ ಪೂರೈಕೆ ಸರಪಳಿಗಳು ಮತ್ತು ಪರೀಕ್ಷಾ ವೈಫಲ್ಯಗಳು ಕಾರಣವೆಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಭಾರತದಲ್ಲಿ ತಯಾರಾದ ಕೆಮ್ಮಿನ ಸಿರಪ್‌ಗಳನ್ನು ವಿಶ್ವಾದ್ಯಂತ 141 ಮಕ್ಕಳ ಸಾವುಗಳೊಂದಿಗೆ ತಳುಕು ಹಾಕಿದ ಬಳಿಕ ದೇಶಾದ್ಯಂತದ ಖಾಸಗಿ ಮತ್ತು ಸರಕಾರಿ ಪ್ರಯೋಗಾಲಯಗಳು ಗುಣಮಟ್ಟ ಪರೀಕ್ಷೆಗಳನ್ನು ನಡೆಸುತ್ತಿವೆ.
ಭಾರತದಲ್ಲಿ ತಯಾರಿತ ವಿಷಕಾರಿ ಕೆಮ್ಮಿನ ಸಿರಪ್‌ಗಳಿಂದಾಗಿ ಸಾವುಗಳು ಮೊದಲ ಬಾರಿಗೆ ಅಕ್ಟೋಬರ್ 2022ರಲ್ಲಿ ಪ್ರಮುಖ ಸುದ್ದಿಯಾಗಿದ್ದವು. ಹರ್ಯಾಣ ಮೂಲದ ಮೇಡನ್ ಫಾರ್ಮಾಸ್ಯೂಟಿಕಲ್ಸ್ ತಯಾರಿಸಿದ್ದ ಇಂತಹ ನಾಲ್ಕು ಔಷಧಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಎಚ್ಚರಿಕೆಯನ್ನು ಹೊರಡಿಸಿತ್ತು. ಇದಕ್ಕೂ ಮುನ್ನ ಗಾಂಬಿಯಾದ ಅಧಿಕಾರಿಗಳು ಈ ನಾಲ್ಕು ಔಷಧಿಗಳು 66 ಮಕ್ಕಳ ಸಾವುಗಳಿಗೆ ಕಾರಣವಾಗಿದ್ದವು ಎಂದು ಆರೋಪಿಸಿದ್ದರು. ಹೆಚ್ಚಿನ ಸಾವುಗಳು ತೀವ್ರ ಮೂತ್ರಪಿಂಡ ವೈಫಲ್ಯದಿಂದ ಸಂಭವಿಸಿದ್ದವು.
ಡಿಸೆಂಬರ್ 2022ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಭಾರತೀಯ ಔಷಧಿ ತಯಾರಿಕೆ ಕಂಪನಿ ಮಾರಿಯಾನ್ ಬಯೊಟೆಕ್‌ನ ಎರಡು ಕೆಮ್ಮಿನ ಸಿರಪ್‌ಗಳನ್ನು ಬಳಸದಂತೆ ಸೂಚಿಸಿತ್ತು. ಕಂಪನಿಯ ಡಾಕ್ 1 ಮ್ಯಾಕ್ಸ್ ಸಿರಪ್ ಸೇವಿಸಿದ ಬಳಿಕ 18 ಮಕ್ಕಳು ಮೃತಪಟ್ಟಿದ್ದಾರೆ ಎಂದು ಉಝ್ಬೆಕಿಸ್ತಾನದ ಆರೋಗ್ಯ ಸಚಿವಾಲಯವು ಹೇಳಿದ ಬಳಿಕ ಈ ಬೆಳವಣಿಗೆ ನಡೆದಿತ್ತು.
ನಂತರ ಆಗಸ್ಟ್ 2023ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಭಾರತೀಯ ತಯಾರಿಕೆಯ ಸಾಮಾನ್ಯ ಶೀತದ ಸಿರಪ್‌ನ ಬ್ಯಾಚ್ ಬಗ್ಗೆ ಇನ್ನೊಂದು ಎಚ್ಚರಿಕೆಯನ್ನು ಹೊರಡಿಸಿತ್ತು.
ಇರಾಕ್‌ನಿಂದ ಪಡೆಯಲಾಗಿದ್ದ ಬ್ಯಾಚ್‌ನ ಸ್ಯಾಂಪಲ್‌ಗಳು ಸ್ವೀಕಾರಾರ್ಹವಲ್ಲದ ಪ್ರಮಾಣದಲ್ಲಿ ಡೈಎಥಿಲಿನ್ ಗ್ಲೈಕಾಲ್ ಮತ್ತು ಎಥಿಲಿನ್ ಗ್ಲೈಕಾಲ್ ಅನ್ನು ಒಳಗೊಂಡಿದ್ದು ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿತ್ತು. ಇದು ಭಾರತದಲ್ಲಿ ತಯಾರಾದ ಸಿರಪ್ ಔಷಧಿಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು 2022ರಿಂದ ಹೊರಡಿಸಿದ್ದ ಐದನೇ ಎಚ್ಚರಿಕೆಯಾಗಿತ್ತು.