ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಬೇಬಿ ಸಿಟ್ಟರ್ ಗಳಾಗಿ ಅರೆಕಾಲಿಕ ಉದ್ಯೋಗ!

Update: 2024-11-22 02:40 GMT

ಸಾಂದರ್ಭಿಕ ಚಿತ್ರ PC: istockphoto.com

ಹೈದರಾಬಾದ್: ಅಮೆರಿಕದ ನಿಮಯಗಳ ಪ್ರಕಾರ ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿ ಮಾತ್ರ ಅರೆಕಾಲಿಕ ಉದ್ಯೋಗ ಮಾಡಬಹುದಾಗಿದ್ದು, ಇದನ್ನು ಉಲ್ಲಂಘಿಸಿ ಕ್ಯಾಂಪಸ್ ನ ಹೊರಗೆ ಅಕ್ರಮ ಅರೆಕಾಲಿಕ ಉದ್ಯೋಗ ಪಡೆಯಬೇಕಾದ ಅನಿವಾರ್ಯ ಸ್ಥಿತಿ ಉದ್ಭವಿಸಿದೆ. ಒಂದು ಕಾಲದಲ್ಲಿ ಅರೆಕಾಲಿಕ ಉದ್ಯೋಗಕ್ಕೆ ಪ್ರಶಸ್ತ ತಾಣವಾಗಿದ್ದ ಅಮೆರಿಕದಲ್ಲಿ ಇದೀಗ ವಿದ್ಯಾರ್ಥಿಗಳು ಸೂಕ್ತ ಉದ್ಯೋಗ ದೊರಕದೇ ಕ್ಯಾಂಪಸ್ ಹೊರಗೆ ಬೇಬಿ ಸಿಟ್ಟರ್ ನಂತಹ ಕೆಲಸ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.

ತೆಲಂಗಾಣ, ಆಂಧ್ರಪ್ರದೇಶ ಮತ್ತು ಇತರೆಡೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಹಣಕಾಸು ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಭಾರತೀಯ ಸಮುದಾಯ ನೆಲೆಸಿರುವ ಪ್ರದೇಶಗಳ ಮೊರೆ ಹೋಗಿದ್ದಾರೆ. ಇದು ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಖಾತರಿಪಡಿಸುವ ಉದ್ಯೋಗವಾಗಿದ್ದು, ಗಂಟೆಗೆ 13 ರಿಂದ 18 ಡಾಲರ್ ಸಂಬಳದ ಜತೆಗೆ ಆಹಾರ, ವಸತಿ ಅಥವಾ ಎರಡೂ ಸೌಲಭ್ಯಗಳೂ ಸಿಗುವ ಕಾರಣ ಹೆಚ್ಚಿನ ಭಾರತೀಯರನ್ನು ಆಕರ್ಷಿಸುತ್ತಿದೆ.

"ನಾನು ಆರು ವರ್ಷದ ಮಗುವನ್ನು ದಿನಕ್ಕೆ ಎಂಟು ಗಂಟೆ ಕಾಲ ನೋಡಿಕೊಳ್ಳುತ್ತೇನೆ. ಗಂಟೆಗೆ 13 ಡಾಲರ್ ವೇತನ ಪಡೆಯುತ್ತೇನೆ. ಹುಡುಗನನ್ನು ನೋಡಿಕೊಂಡದ್ದಕ್ಕೆ ಊಟವೂ ಕೊಡುತ್ತಾರೆ" ಎಂದು ಓಹಿಯೊದಲ್ಲಿ ಓದುತ್ತಿರುವ ಹೈದರಾಬಾದ್ ವಿದ್ಯಾರ್ಥಿಯೊಬ್ಬರು ಹೇಳುತ್ತಾರೆ. ಇದು ಸ್ಥಳೀಯ ಅಂಗಡಿಗಳಲ್ಲಿ ಅಥವಾ ಅನಿಲ ವಿತರಣೆ ಕೇಂದ್ರಗಳಲ್ಲಿ ಕೆಲಸ ಮಾಡುವುದಕ್ಕಿಂತ ಒಳ್ಳೆಯ ಆಯ್ಕೆ ಎನ್ನುವುದು ಅವರ ಅಭಿಪ್ರಾಯ.

ಕನೆಕ್ಟಿಕಟ್ ನ ಮತ್ತೊಬ್ಬ ತೆಲುಗು ವಿದ್ಯಾರ್ಥಿನಿಗೆ ಅಹಾರ ಮತ್ತು ವಸತಿ ವ್ಯವಸ್ಥೆಯನ್ನೂ ಉದ್ಯೋಗದಾತರು ಕಲ್ಪಿಸಿದ್ದಾರೆ. "ಎರಡೂವರೆ ವರ್ಷದ ಮಗುವನ್ನು ವಾರಕ್ಕೆ ಆರು ದಿನಗಳ ಕಾಲ ನೋಡಿಕೊಳ್ಳಬೆಕು. ಈ ಆರು ದಿನಗಳ ಕಾಲ ಆಹಾರ ಮತ್ತು ವಸತಿಯನ್ನು ಬಾಲಕಿಯ ಪೋಷಕರು ನೋಡಿಕೊಳ್ಳುತ್ತಾರೆ. ಭಾನುವಾರ ನನ್ನ ಸ್ನೇಹಿತೆಯ ಮನೆಯಲ್ಲಿ ಉಳಿದುಕೊಳ್ಳುತ್ತೇನೆ" ಎಂದು 23 ವರ್ಷದ ವಿದ್ಯಾರ್ಥಿನಿ ಹೇಳುತ್ತಾರೆ. ಗಂಟೆಗೆ ಕೇವಲ 10 ಡಾಲರ್ ವೇತನ ಸಿಕ್ಕರೂ, ಬಾಡಿಗೆ ನೀಡುವ ಅಗತ್ಯವಿಲ್ಲ ಎಂಬ ಕಾರಣಕ್ಕೆ ಖುಷಿಯಾಗಿದ್ದಾರೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ಮಾಸಿಕ 300 ಡಾಲರ್ ಬಾಡಿಗೆ ಪಾವತಿಸಬೇಕಾಗುತ್ತದೆ. ಓಪನ್ ಡೊರ್ಸ್-2024ರ ವರದಿಯ ಪ್ರಕಾರ, ಟೆಕ್ಸಸ್ ನಲ್ಲಿ 39 ಸಾವಿರ, ಇಲಿನೋಯಿಸ್ನಲ್ಲಿ 20 ಸಾವಿರ, ಒಹಿಯೊದಲ್ಲಿ 13500 ಮತ್ತು ಕನೆಕ್ಟಿಕಟ್ ನಲ್ಲಿ 7000 ಭಾರತೀಯ ವಿದ್ಯಾರ್ಥಿಗಳಿದ್ದು, ಈ ಪೈಕಿ ಶೇಕಡ 50ರಷ್ಟು ತೆಲುಗು ಮೂಲದವರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News