ಏಳು ದಿನಗಳಲ್ಲಿ ಪಶ್ಚಿಮ ಬಂಗಾಳದ ಬಾಕಿ ಪಾವತಿಸಿ, ಇಲ್ಲವೇ ಪ್ರತಿಭಟನೆ ಎದುರಿಸಿ : ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ಎಚ್ಚರಿಕೆ
ಕೋಲ್ಕತಾ: ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ರಾಜ್ಯಕ್ಕೆ ಬರಬೇಕಿರುವ ಬಾಕಿಯನ್ನು ಏಳು ದಿನಗಳಲ್ಲಿ ಪಾವತಿಸದಿದ್ದರೆ ತನ್ನ ಪಕ್ಷವು ಅದರ ವಿರುದ್ಧ ಪ್ರತಿಭಟನೆಯನ್ನು ಆರಂಭಿಸಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ಎಚ್ಚರಿಕೆ ನೀಡಿದ್ದಾರೆ.
ರಾಜಭವನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಮತಾ ಈ ಎಚ್ಚರಿಕೆ ನೀಡಿದರು.
ಮಮತಾ ಸರಕಾರದ ಪ್ರಕಾರ ಕೇಂದ್ರವು ಪಶ್ಚಿಮ ಬಂಗಾಳಕ್ಕೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 9,330 ಕೋಟಿ ರೂ.,ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 6,900 ಕೋಟಿ ರೂ.,ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 830 ಕೋಟಿ ರೂ.,ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 770 ಕೋಟಿ ರೂ.,ಸ್ವಚ್ಛ ಭಾರತ ಅಭಿಯಾನದಡಿ 350 ಕೋಟಿ ರೂ. ಮತ್ತು ಮಧ್ಯಾಹ್ನದೂಟ ಯೋಜನೆಯಡಿ 175 ಕೋಟಿ ರೂ.ಗಳ ಬಾಕಿಗಳನ್ನು ಪಾವತಿಸಬೇಕಿದೆ. ಇದರ ಜೊತೆ ಇತರ ಕೆಲವು ಯೋಜನೆಗಳಿಗೆ ವೆಚ್ಚ ಮಾಡಿರುವ ಹಣವನ್ನೂ ರಾಜ್ಯಕ್ಕೆ ಮರಳಿಸಬೇಕಿದೆ.
ಮಮತಾ ಡಿ.20ರಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಕೇಂದ್ರದಿಂದ ರಾಜ್ಯಕ್ಕೆ ಬಾಕಿಯಿರುವ ಹಣಕಾಸಿನ ಕುರಿತು ಚರ್ಚಿಸಿದ್ದರು. ಇತ್ತೀಚಿಗಷ್ಟೇ ರಾಜ್ಯ ಸರಕಾರದ ಅಧಿಕಾರಿಗಳ ತಂಡವೊಂದು ಕೇಂದ್ರದ ಅಧಿಕಾರಿಗಳನ್ನು ಭೇಟಿಯಾಗಿ ನರೇಗಾ ಯೋಜನೆಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರಗಳು ಮತ್ತು ಅವುಗಳನ್ನು ಬಗೆಹರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿಯನ್ನು ಸಲ್ಲಿಸಿತ್ತು.