2019ರ ಲೋಕಸಭೆ ಮತದಾನದ ಇವಿಎಂ-ವಿವಿಪಾಟ್ ತಾಳೆ ಹಾಕಿದ ದತ್ತಾಂಶ ನೀಡದ ಕೇಂದ್ರಕ್ಕೆ ಪಿಸಿಜಿಎ ತರಾಟೆ
ಹೊಸದಿಲ್ಲಿ: 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ವಿವಿಎಂ ಹಾಗೂ ವಿವಿಪಾಟ್ ಗಳ ನಡುವೆ ಯಾವುದಾದರೂ ವ್ಯತ್ಯಾಸಗಳು ಇವೆಯೇ ಎಂಬ ಬಗ್ಗೆ ಮಾಹಿತಿ ನೀಡುವ ಕುರಿತು 2019ರಲ್ಲಿ ಸದನದಲ್ಲಿ ನೀಡಿದ ಭರವಸೆ ಈಡೇರಿಸಲು ವಿಫಲವಾದ ಕೇಂದ್ರ ಸರಕಾರವನ್ನು ಸರಕಾರ ಭರವಸೆಗಳ ಸಂಸದೀಯ ಸಮಿತಿ (PCGA) ತರಾಟೆಗೆ ತೆಗೆದುಕೊಂಡಿದೆ.
ಕಾನೂನು ಹಾಗೂ ನ್ಯಾಯ ಸಚಿವಾಲಯಕ್ಕೆ ಸಂಬಂಧಿಸಿದ ಬಾಕಿಯಾದ ಭರವಸೆಗಳ ಪುನರ್ ಪರಿಶೀಲನೆ ಕುರಿತ ತನ್ನ 85ನೇ ವರದಿಯಲ್ಲಿ ಸರಕಾರ ಸಂಸತ್ತಿಗೆ ಮಾಹಿತಿ ಒದಗಿಸುವುದರಲ್ಲಿ ವಿಫಲವಾಗಿರುವ ಬಗ್ಗೆ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಸಚಿವಾಲಯ ಇನ್ನು ಕೂಡ ಚುನಾವಣಾ ಆಯೋಗದಿಂದ ಮಾಹಿತಿಗಾಗಿ ಕಾಯುತ್ತಿದೆ ಎಂಬ ಅಂಶ ತೀವ್ರ ಕಳವಳಕಾರಿಯಾಗಿದೆ ಎಂದು ಹೇಳಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಸಮಗ್ರತೆ ಹಾಗೂ ಪಾರದರ್ಶಕತೆಯ ಖಾತರಿ ನೀಡಲು ಇವಿಎಂ ಹಾಗೂ ವಿವಿ ಪಾಟ್ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳುವುದು ನಿರ್ಣಾಯಕ ಅಂಶವಾಗಿದೆ. ಮತದಾನದ ಪ್ರಕ್ರಿಯೆಯಲ್ಲಿ ಭದ್ರತೆ ಹಾಗೂ ವಿಶ್ವಾಸಾರ್ಹತೆಯ ಖಾತರಿ ನೀಡುವಲ್ಲಿ ಇಂತಹ ವಿಷಯಗಳು ಎಲ್ಲದಕ್ಕಿಂತ ಹೆಚ್ಚು ಮುಖ್ಯವಾದುದು ಎಂದು ಗುರುತಿಸುವ ಅಗತ್ಯತೆ ಇದೆ ಎಂಬುದು ನಮ್ಮ ಭಾವನೆ ಎಂದು ಸಮಿತಿ ಹೇಳಿದೆ. ಮತದಾರರ ಆಯ್ಕೆಯ ನಿಖರ ಪ್ರತಿಬಿಂಬವನ್ನು ಒದಗಿಸಲು ಇವಿಎಂ ಹಾಗೂ ವಿವಿಪಾಟ್ಗಳನ್ನು ವಿನ್ಯಾಸಗೊಳಿಸಲಾಗಿದೆ. ವ್ಯತ್ಯಾಸವನ್ನು ಪತ್ತೆ ಹಚ್ಚುವುದರಿಂದ ಕಾನೂನು ಅವಶ್ಯಕತೆಗಳ ಅನುಸರಣೆಯ ಖಾತ್ರಿಗೆ ನೆರವಾಗುತ್ತದೆ ಎಂದು ಸಮಿತಿ ಹೇಳಿದೆ.
ವ್ಯತ್ಯಾಸವನ್ನು ಪರಿಣಾಮಕಾರಿಯಾಗಿ ಪರಿಹರಿಸುವ ದಿಶೆಯಲ್ಲಿ ದೃಢವಾದ ಕಾರ್ಯ ವಿಧಾನ ಹಾಗೂ ಶಿಷ್ಟಚಾರಗಳನ್ನು ಅನುಷ್ಠಾನಗೊಳಿಸಲು ಚುನಾವಣಾ ಪ್ರಾಧಿಕಾರಗಳು, ಸರಕಾರದ ಸಂಸ್ಥೆಗಳು ಹಾಗೂ ಈ ವಿಷಯಕ್ಕೆ ಸಂಬಂಧಿಸಿದ ತಜ್ಞರು ಸಹಭಾಗಿಗಳಾಗಬೇಕು ಎಂದು ಸಮಿತಿ ಹೇಳಿದೆ.