ಪಿಡಿಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ: ಜಮ್ಮುಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪನೆ, ಅಫ್‌ಸ್ಪಾ ಕಾಯ್ದೆ ರದ್ದತಿಗೆ ಪ್ರಯತ್ನಿಸುವ ಅಶ್ವಾಸನೆ
ಶ್ರೀನಗರ: ಜಮ್ಮುಕಾಶ್ಮೀರ ವಿಧಾನಸಭಾ ಚುನಾವಣೆಗೆ ಪಿಡಿಪಿ ಪಕ್ಷವು ತನ್ನ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆಗೊಳಿಸಿದೆ. ಜಮ್ಮುಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಅದು ಭರವಸೆ ನೀಡಿದೆ.
ಭಾರತ ಹಾಗೂ ಪಾಕಿಸ್ತಾನಗಳ ನಡುವೆ ರಾಜತಾಂತ್ರಿಕ ಉಪಕ್ರಮಗಳನ್ನು ಕೈಗೊಳ್ಳುವುದನ್ನು ಪ್ರತಿಪಾದಿಸುವುದಾಗಿ ಅದು ಭರವಸೆ ನೀಡಿದೆ. ವ್ಯಾಪಾರ ಹಾಗೂ ಸಾಮಾಜಿಕ ವಿನಿಮಯಕ್ಕಾಗಿನ ನಿಯಂತ್ರಣ ರೇಖೆ (ಎಲ್‌ಓಸಿ)ಯುದ್ದಕ್ಕೂ ಸಂಪೂರ್ಣ ಸಂಪರ್ಕಶೀಲತೆಯನ್ನು ಸ್ಥಾಪಿಸುವುದಾಗಿ ಅದು ಭರವಸೆ ನೀಡಿದೆ.
ಶ್ರೀನಗರದಲ್ಲಿರುವ ಪಿಡಿಪಿ ಮುಖ್ಯ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಪ್ತಿ ಹಾಗೂ ಇತರ ಹಿರಿಯ ನಾಯಕರೊಂದಿಗೆ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.
ಜನತೆಯ ಆಶೋತ್ತರಗಳು ಎಂಬ ಶೀರ್ಷಿಕೆಯ ಈ ಪ್ರಣಾಳಿಕೆಯು ಪ್ರಾದೇಶಿಕ ಮುಕ್ತ ವಾಣಿಜ್ಯ ಪ್ರದೇಶ ಹಾಗೂ ಆರ್ಥಿಕ ಮಾರುಕಟ್ಟೆಯ ಹಂಚಿಕೆ, ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ), ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಹಾಗೂ ಶತ್ರು ಕಾಯ್ದೆಗಳನ್ನು ರದ್ದುಪಡಿಸಲು ಪ್ರಯತ್ನಿಸಲಾಗುವುದೆಂದು ಪಿಡಿಪಿ ಪ್ರಣಾಳಿಕೆ ಭರವಸೆ ನೀಡಿದೆ. ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಅಪ್‌ಸ್ಪಾ)ಯ ರದ್ದತಿಗೆ ಬದ್ಧವಾಗಿರುವುದಾಗಿಯೂ ಅದು ತಿಳಿಸಿದೆ.
ಭಯೋತ್ಪಾದನಾ ಚಟುವಟಿಕೆಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಜಮ್ಮುಕಾಶ್ಮೀರದ ಸರಕಾರಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿರುವುದನ್ನು ಪ್ರಸ್ತಾವಿಸಿರುವ ಪ್ರಣಾಳಿಕೆಯು ನ್ಯಾಯಯುತವಲ್ಲದ ಉದ್ಯೋಗದಿಂದ ವಜಾ ಪ್ರಕರಣಗಳನ್ನು ಮರುರಿಶೀಲಿಸುವುದಾಗಿ ಹೇಳಿದೆ.