ಸುಪ್ರೀಂಕೋರ್ಟ್ ನಲ್ಲಿ ಬಾಕಿ ಪ್ರಕರಣ: 5 ವರ್ಷದಲ್ಲಿ ಶೇಕಡ 35ರಷ್ಟು ಹೆಚ್ಚಳ

Update: 2024-07-29 03:19 GMT

ಹೊಸದಿಲ್ಲಿ: ಸುಪ್ರೀಂಕೋರ್ಟ್ ನಲ್ಲಿ ಬಾಕಿ ಪ್ರಕರಣ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ಶೇಕಡ 35ರಷ್ಟು ಹೆಚ್ಚಿದ್ದು, 2019ರಲ್ಲಿ 59,859 ಇದ್ದ ಬಾಕಿ ಪ್ರಕರಣ ಸಂಖ್ಯೆ 2023ರ ಕೊನೆಗೆ 80,765ಕ್ಕೇರಿದೆ ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಲೋಕಸಭೆಗೆ ತಿಳಿಸಿದ್ದಾರೆ. ಈ ಅವಧಿಯಲ್ಲಿ ಸಂಪೂರ್ಣ ಬಲದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದರೂ, ಸುಮಾರು 20,900 ಪ್ರಕರಣಗಳು ಹೆಚ್ಚಿವೆ ಎಂದು ಅವರು ವಿವರಿಸಿದ್ದಾರೆ.

ದೇಶದ ಹೈಕೋರ್ಟ್ ಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ 2019ರಲ್ಲಿ 46.8 ಲಕ್ಷ ಇದ್ದುದು 2023ರ ವೇಳೆಗೆ 62 ಲಕ್ಷಕ್ಕೆ ಹೆಚ್ಚಿದೆ. ಈ ಅವಧಿಯಲ್ಲಿ 15 ಲಕ್ಷ ಬಾಕಿ ಪ್ರಕರಣಗಳು ಹೆಚ್ಚುವ ಮೂಲಕ ಶೇಕಡ 33ರಷ್ಟು ಏರಿಕೆ ಕಂಡುಬಂದಿದೆ.

ಅಧೀನ ಕೋರ್ಟ್ ಗಳಲ್ಲಿ ಅತಿಹೆಚ್ಚು ಪ್ರಕರಣಗಳು ಬಾಕಿ ಇದ್ದು, 2023ರ ಕೊನೆಗೆ 4.4 ಕೋಟಿ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. 3.2 ಕೋಟಿ ಬಾಕಿ ಪ್ರಕರಣಗಳಿದ್ದ 2019ಕ್ಕೆ ಹೋಲಿಸಿದರೆ 1.2 ಕೋಟಿ ಪ್ರಕರಣಗಳು ಈ ಅವಧಿಯಲ್ಲಿ ಹೆಚ್ಚಿದ್ದು, ಶೇಕಡ 38ರಷ್ಟು ಹೆಚ್ಚಳ ದಾಖಲಾಗಿದೆ ಎಂದು ಸರ್ಕಾರ ಬಹಿರಂಗಪಡಿಸಿದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

"ಕೋರ್ಟ್ ಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಲು ಹಲವು ಕಾರಣಗಳಿದ್ದು, ಭೌತಿಕ ಮೂಲಸೌಕರ್ಯಗಳ ಲಭ್ಯತೆ ಮತ್ತು ಕೋರ್ಟ್ ಗಳಲ್ಲಿ ಪೂರಕ ಸಿಬ್ಬಂದಿಯ ಕೊರತೆ, ಪ್ರಕರಣಗಳಲ್ಲಿ ಒಳಗೊಂಡಿರುವ ಸಂಕೀರ್ಣ ಅಂಶಗಳು, ಪುರಾವೆಗಳ ಸ್ವರೂಪ, ವಕೀಲರು, ತನಿಖಾ ಏಜೆನ್ಸಿಗಳು, ಸಾಕ್ಷಿಗಳು ಹಾಗೂ ವಾದಿ-ಪ್ರತಿವಾದಿಗಳು ಹೀಗೆ ಸಂಬಂಧಪಟ್ಟವರು, ನಿಯಮ ಮತ್ತು ವಿಧಿವಿಧಾನಗಳ ಅನ್ವಯಿಕೆ ಪ್ರಮುಖ" ಎಂದು ಸಚಿವರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News