ಹಣ ಲೂಟಿ ಮಾಡುವಲ್ಲೇ ನಿರತರಾದ ಜನ; ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಮೃತ್ಯು!

Update: 2024-01-14 04:56 GMT

ಆಗ್ರಾ: ಅಪಘಾತದಲ್ಲಿ ಗಾಯಗೊಂಡಗೊಂಡ ವ್ಯಕ್ತಿಗೆ ವೈದ್ಯಕೀಯ ನೆರವು ನೀಡುವ ಬದಲು, ಜನರು ಆತನ ಹಣ ಲೂಟಿ ಮಾಡುವಲ್ಲೇ ನಿರತರಾದ ಕಾರಣ ಸಕಾಲಕ್ಕೆ ಚಿಕಿತ್ಸೆ ದೊರಕದೇ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ದೆಹಲಿ- ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಆಗ್ರಾದ ವ್ಯಾಪಾರಿ ಧರ್ಮೇಂದ್ರ ಕುಮಾರ್ ಗುಪ್ತಾ (46) ಎಂದು ಗುರುತಿಸಲಾಗಿದೆ. ಅಪಘಾತ ಸ್ಥಳದಲ್ಲಿ ಜಮಾಯಿಸಿದ ಜನ ಆತನ ನೆರವಿಗೆ ಬಂದು, ಸೂಕ್ತ ವೈದ್ಯಕೀಯ ನೆರವನ್ನು ಸಕಾಲಕ್ಕೆ ಒದಗಿಸಿದಲ್ಲಿ ಈ ಅಪಘಾತ ಸಂತ್ರಸ್ತನ ಜೀವ ಉಳಿಯುತ್ತಿತ್ತು.

ಆದರೆ ತೀವ್ರ ಗಾಯಗೊಂಡ ಧರ್ಮೇಂದ್ರ ಅವರು ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದ್ದರೆ, ಸೇರಿದ್ದ ಜನ ಅವರ 1.5 ಲಕ್ಷ ರೂಪಾಯಿ ಲೂಟಿ ಮಾಡುವಲ್ಲಿ ನಿರತರಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

47 ಸೆಕೆಂಡ್ ಗಳ ಈ ವಿಡಿಯೊ ಪೊಲೀಸರ ಗಮನಕ್ಕೂ ಬಂದಿದ್ದು, ಈ ವಿಚಾರದಲ್ಲಿ ಎಫ್ಐಆರ್ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಮಂಗಳವಾರ ಈ ಘಟನೆ ನಡೆದಿದ್ದು, ದೆಹಲಿ- ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಟ್ರಕ್, 20ಕ್ಕೂ ಹೆಚ್ಚು ವಾಹನಗಳಿಗೆ ಢಿಕ್ಕಿ ಹೊಡೆದು ಧರ್ಮೇಂದ್ರ ಸೇರಿದಂತೆ ಮೂವರ ಸಾವಿಗೆ ಕಾರಣವಾಗಿತ್ತು. ಹಾಲು ವ್ಯವಹಾರ ಮಾಡಿ ಬೈಕ್ ನಲ್ಲಿ ಮಥುರಾದಿಂದ ಮನೆಗೆ ವಾಪಸ್ಸಾಗುತ್ತಿದ್ದ ಧರ್ಮೇಂದ್ರ ಅವರ ಬಳಿ ಇದ್ದ ಬ್ಯಾಗ್ ನಲ್ಲಿ 1.5 ಲಕ್ಷ ರೂಪಾಯಿ ಇತ್ತು ಎಂದು ಕುಟುಂಬದವರು ಹೇಳಿದ್ದಾರೆ.

ಭಾನುವಾರ ಈ ವಿಡಿಯೊ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದ್ದು, ಅಪಘಾತ ನಡೆದ ಸ್ಥಳದಲ್ಲಿ ಧರ್ಮೇಂದ್ರ ಸುತ್ತ ಮುತ್ತ ಸೇರಿದ್ದ ಜನ, ಈ ಹಣವನ್ನು ಪೊಲೀಸರಿಗೆ ಹಸ್ತಾಂತರಿಸುವಂತೆ, ತಮ್ಮಲ್ಲೇ ಇಟ್ಟುಕೊಳ್ಳುವಂತೆ ಅಥವಾ ಆತನಿಗೆ ನೆರವಾಗುವಂತೆ ಚರ್ಚೆ ಮಾಡುತ್ತಿದ್ದುದು ಕೇಳಿಸುತ್ತಿದೆ. ಕೆಲವರು "ಉಠಾ ಲೋ ಪೈಸಾ ಉಠಾಲೋ" (ಮೊದಲು ಹಣವನ್ನು ತೆಗೆದುಕೊಳ್ಳಿ) ಎಂದು ಹೇಳಿ ನೋಟಿನ ಕಂತೆಗಳನ್ನು ತಮ್ಮ ಚೀಲಕ್ಕೆ ತುಂಬಿಸಿಕೊಳ್ಳುವುದು ಕಾಣುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News