ಮೋದಿಯ ಹುಸಿ ಕಾರ್ಯಕ್ರಮಗಳು, ಕೇಂದ್ರೀಯ ಸಂಸ್ಥೆಗಳ ದುರ್ಬಳಕೆಯನ್ನು ರಾಜಸ್ಥಾನದ ಜನತೆ ತಿರಸ್ಕರಿಸಲಿದ್ದಾರೆ: ಜೈರಾಮ್ ರಮೇಶ್

Update: 2023-11-25 14:32 GMT

ಜೈರಾಮ್ ರಮೇಶ್ | Photo: PTI

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ‘ ಹುಸಿ ಕಾರ್ಯಕ್ರಮ’ಗಳನ್ನು ರಾಜಸ್ಥಾನದ ಜನತೆ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ತಿರಸ್ಕರಿಸಲಿದ್ದಾರೆ ಹಾಗೂ ಕೇಂದ್ರೀಯ ತನಿಖಾ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೂ ಒಂದು ಮಿತಿಯಿದೆ ಎಂಬುದನ್ನು ಅವರ ಸರಕಾರ ಅರಿತುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಶನಿವಾರ ತಿಳಿಸಿದ್ದಾರೆ.

‘‘ರಾಜಸ್ಥಾನದಲ್ಲಿ ಮತದಾನ ನಡೆಯುತ್ತಿದೆ. ಪ್ರಧಾನಿಯವರ ಸುಳ್ಳು ಯೋಜನೆಗಳನ್ನು ರಾಜಸ್ಥಾನದ ಜನರು ತಿರಸ್ಕರಿಸಲಿದ್ದಾರೆ. ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೂ ಒಂದು ಮಿತಿಯಿದೆ ಎಂಬುದನ್ನು ಕೇಂದ್ರ ಸರಕಾರವು ಅರಿತುಕೊಳ್ಳಬೇಕಾಗಿದೆ’’ ಎಂದವರು ಹೇಳಿದರು.

ರಾಜಸ್ಥಾನದಲ್ಲಿ ಈ ಸಲವೂ ಕಾಂಗ್ರೆಸ್ ಜಯಭೇರಿ ಬಾರಿಸಲಿದ್ದು, ಒಂದೇ ಪಕ್ಷದ ಸರಕಾರಕ್ಕೆ ಸತತ ಎರಡನೇ ಅವಧಿಗೆ ಅವಕಾಶ ನೀಡದಿರುವ ರಾಜಸ್ಥಾನದ ರಾಜಕೀಯ ಪರಂಪರೆಯು ಈ ಸಲ ಬದಲಾಗಲಿದೆ ಎಂದವರು ಹೇಳಿದ್ದಾರೆ.

ಧ್ರುವೀಕರಣದ ರಾಜಕೀಯವನ್ನು ರಾಜಸ್ಥಾನದ ಜನತೆ ತಿರಸ್ಕರಿಸಲಿದ್ದು, ಕಾಂಗ್ರೆಸಿನ ಸಾಧನೆಗಳು ಹಾಗೂ ಗ್ಯಾರಂಟಿಗಳ ಪರವಾಗಿ ಮತ ಚಲಾಯಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ಅವರ ವಿಶ್ವಾಸವು ಅಬಾಧಿತವಾಗಿದೆ’’ ಎಂದು ರಾಜ್ಯಸಭಾ ಸಂಸದರೂ ಆದ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿಕೆಯೊಂದನ್ನು ನೀಡಿ, ಕಾಂಗ್ರೆಸ್ ಸರಕಾರದ ಐದು ವರ್ಷಗಳ ಉತ್ಕೃಷ್ಟ ಆಡಳಿತ ಹಾಗೂ ಕಲ್ಯಾಣ ಕಾರ್ಯಕ್ರಮಗಳು ರಾಜಸ್ಥಾನದ ಚಹರೆಯನ್ನೇ ಬದಲಾಯಿಸಿದೆ. ಪ್ರತಿಯೊಬ್ಬರಿಗೂ ಸುರಕ್ಷಿತ ಹಾಗೂ ಸುಭದ್ರವಾದ ವಾತಾವರಣವನ್ನು ಕಲ್ಪಿಸಿದೆ ಎಂದು ತಿಳಿಸಿದ್ದಾರೆ.

ಚಿರಂಜೀವಿ ಯೋಜನೆ, ಮಹಿಳೆಯರಿಗೆ ಮೊಬೈಲ್ ಫೋನ್, ಇಂದಿರಾ ರಸೋಯಿನಂತಹ ಹಲವಾರು ಬಡವರ ಪರವಾದ ಯೋಜನೆಗಳು ಅರ್ಥಗರ್ಭಿತವಾದ ಪರಿಣಾಮವನ್ನು ಉಂಟು ಮಾಡಿದೆ. ಹಿಂದಿನ ಬಿಜೆಪಿ ಆಡಳಿತದ ದುರಾಡಳಿತದಲ್ಲಿ ದೈನಂದಿನ ಬದುಕು ದುರ್ಭರವಾಗಿತ್ತು ಹಾಗೂ ಆ ಪಕ್ಷದ ನಾಯಕರು, ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಹಾಗೂ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡುವುದರಲ್ಲೇ ನಿರತರಾಗಿದ್ದರು’’ ಎಂದು ರಮೇಶ್ ಆಪಾದಿಸಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಮರಳಿದ ಬೆನ್ನಲ್ಲೇ, ಚುನಾವಣೆ ಸಂದರ್ಭ ನೀಡಲಾದ ಎಲ್ಲಾ ಏಳು ಆಶ್ವಾಸನೆಗಳನ್ನು ಈಡೇರಿಸಲಾಗುವುದು ಎಂದವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News