ಚಲನಚಿತ್ರಗಳಲ್ಲಿ ವಿಕಲಚೇತನರನ್ನು ಒಂದೇ ರೀತಿಯಲ್ಲಿ ತೋರಿಸಲಾಗುತ್ತಿದೆ, ದೃಶ್ಯ ಮಾಧ್ಯಮಗಳು ತಾರತಮ್ಯವನ್ನು ಶಾಶ್ವತಗೊಳಿಸುತ್ತಿವೆ: ಸುಪ್ರೀಂ ಕೋರ್ಟ್

Update: 2024-07-08 11:37 GMT

ಸುಪ್ರೀಂ ಕೋರ್ಟ್ |  PC : PTI 

ಹೊಸದಿಲ್ಲಿ: ದೃಶ್ಯ ಮಾಧ್ಯಮಗಳು ಮತ್ತು ಚಲನಚಿತ್ರಗಳಲ್ಲಿ ವಿಕಲಚೇತನ ವ್ಯಕ್ತಿಗಳನ್ನು ಒಂದೇ ಮಾದರಿಯಲ್ಲಿ ತೋರಿಸುವುದು ತಾರತಮ್ಯವನ್ನು ಶಾಶ್ವತಗೊಳಿಸುತ್ತದೆ ಎಂದು ಸೋಮವಾರ ಹೇಳಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು,ನಿರ್ಮಾಪಕರು ವಿಕಲಚೇತನ ವ್ಯಕ್ತಿಗಳನ್ನು ಅಪಹಾಸ್ಯ ಮಾಡುವ ಅಥವಾ ಮಿಥ್ಯೀಕರಿಸುವ ಬದಲು ಅವರ ವೈಕಲ್ಯಗಳ ನಿಖರವಾದ ಚಿತ್ರಣವನ್ನು ಒದಗಿಸಬೇಕು ಎಂದು ಹೇಳಿತು.

‘ಪಥ ಪ್ರವರ್ತಕ ’ಎಂದು ಪೀಠದ ಸದಸ್ಯರಾಗಿದ್ದ ನ್ಯಾ.ಜೆ.ಬಿ.ಪರ್ಡಿವಾಲಾ ಅವರು ಬಣ್ಣಿಸಿದ ತೀರ್ಪು,ವಿಕಲಚೇತನ ವ್ಯಕ್ತಿಗಳಿಗೆ ಕಳಂಕವನ್ನುಂಟು ಮಾಡುವ ‘ಅಂಗವಿಕಲ’,‘ಹೆಳವ’ದಂತಹ ಪದಗಳ ಬಳಕೆಯನ್ನು ಖಂಡಿಸಿದೆ.

ಸೋನಿ ಪಿಕ್ಚರ್ಸ್ ನಿರ್ಮಾಣದ ‘ಆಂಖ ಮಿಚೋಲಿ’ ಚಿತ್ರದಲ್ಲಿ ವಿಕಲಚೇತನ ವ್ಯಕ್ತಿಗಳ ಸಂವೇದನಾರಹಿತ ಚಿತ್ರಣವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ನಿಪುಣ ಮಲ್ಹೋತ್ರಾ ಅವರು ಸಲ್ಲಿಸಿದ ಅರ್ಜಿಯ ಕುರಿತಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ.

ಕಾನೂನು ಚೌಕಟ್ಟು ವಿಕಲಚೇತನ ವ್ಯಕ್ತಿಗಳ ಘನತೆ ಮತ್ತು ಅನನ್ಯತೆಯ ಮೇಲೆ ಕಳಂಕ ಮತ್ತು ತಾರತಮ್ಯದ ಗಾಢ ಪರಿಣಾಮವನ್ನು ಗುರುತಿಸಿ ಅವುಗಳನ್ನು ತಡೆಯುವುದಕ್ಕೆ ಒತ್ತು ನೀಡಿದೆ. ಆದರೂ ಐತಿಹಾಸಿಕವಾಗಿ ವಿಕಲಚೇತನರ ಅಸಹನೀಯ ನಿರೂಪಣೆ ಮುಂದುವರಿದಿದೆ ಎಂದು ನ್ಯಾಯಾಲಯವು ಹೇಳಿತು.

ವಿಕಲಚೇತನ ವ್ಯಕ್ತಿಗಳನ್ನು ಹಾಸ್ಯಕ್ಕಾಗಿ ಬಳಸಲಾಗುತ್ತದೆ. ಅವರನ್ನು ಒಳಗೊಂಡ ಜೋಕ್‌ಗಳನ್ನು ಮಾಡಲಾಗುತ್ತದೆ. ಅಂಗವೈಕಲ್ಯವನ್ನು ಅಣಕಿಸಲು ಹಾಸ್ಯವನ್ನು ಬಳಸಲಾಗುತ್ತಿದೆ ಎಂದು ಗಮನಿಸಿದ ನ್ಯಾ.ಚಂದ್ರಚೂಡ್ ಅವರು,ಚಲನಚಿತ್ರಗಳು ಮತು ದೃಶ್ಯ ಮಾಧ್ಯಮಗಳು ವೈಕಲ್ಯಗಳ ಕುರಿತು ಮಿಥ್ಯೆಗಳನ್ನು ಶಾಶ್ವತವಾಗಿಸುತ್ತಿವೆ, ಕೆಲವು ವಿಕಲಚೇತನರನ್ನು ‘ಸೂಪರ್ ಅಂಗವಿಕಲರು’ ಎಂದು ಬಿಂಬಿಸಲಾಗುತ್ತಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News