137 ಕ್ಷೇತ್ರಗಳಲ್ಲಿ ಮತ ಚಲಾಯಿಸಿದ ಮಹಿಳೆಯರ ಶೇಕಡಾವಾರು ಪ್ರಮಾಣ ಅಧಿಕ

Update: 2024-05-24 05:14 GMT

Photo: PTI

ಹೊಸದಿಲ್ಲಿ: ಸಾರ್ವತ್ರಿಕ ಚುನಾವಣೆಯ ಮೊದಲ ಐದು ಹಂತಗಳಲ್ಲಿ ಮತದಾನ ನಡೆದ 427 ಕ್ಷೇತ್ರಗಳ ಪೈಕಿ 137 ಕ್ಷೇತ್ರಗಳಲ್ಲಿ ಮತ ಚಲಾಯಿಸಿರುವ ಮಹಿಳೆಯರ ಪ್ರಮಾಣ, ಪುರುಷರಿಗಿಂತ ಅಧಿಕ ಎನ್ನುವ ಅಂಶ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಇದು ಮತದಾನ ನಡೆದ ಒಟ್ಟು ಕ್ಷೇತ್ರಗಳ ಶೇಕಡ 32ರಷ್ಟು.

ಮಹಿಳಾ ಮತದಾರರ ಶೇಕಡಾವಾರು ಪ್ರಮಾಣ ಅಧಿಕವಾದರೂ, ಇದು ಸಂಖ್ಯೆಯಲ್ಲಿ ಅವರ ಪ್ರಾಬಲ್ಯವನ್ನು ಸೂಚಿಸುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿರುವುದು ಒಳ್ಳೆಯ ಲಕ್ಷಣ ಮತ್ತು ಆಡಳಿತದಲ್ಲಿ ತಮಗೆ ಪಾಲು ಕೇಳಲು ಉತ್ಸುಕರಾಗಿದ್ದಾರೆ ಎನ್ನುವುದರ ಸೂಚಕ ಎನ್ನುವುದು ಅವರ ಅಭಿಮತ.

ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ, ಬಿಹಾರದ 40 ಕ್ಷೇತ್ರಗಳ ಪೈಕಿ 24 ಸ್ಥಾನಗಳಲ್ಲಿ ಮತದಾನ ಪೂರ್ಣಗೊಂಡಿದ್ದು, ಕಳೆದ ನಾಲ್ಕು ಹಂತದ ಮತದಾನದಲ್ಲಿ 20 ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಮೊದಲ ಹಂತದಲ್ಲಿ ಕೇವಲ ಜಮೂಯಿ ಕ್ಷೇತ್ರದಲ್ಲಿ ಮಾತ್ರ ಮತದಾನ ಮಾಡಿದ ಶೇಕಡಾವಾರು ಮಹಿಳೆಯರ ಪ್ರಮಾಣ ಅಧಿಕವಾಗಿತ್ತು.

ಜಾರ್ಖಂಡ್‍ನಲ್ಲಿ ಕೂಡಾ ನಾಲ್ಕು ಹಾಗೂ ಐದನೇ ಹಂತದಲ್ಲಿ ಎಂಟು ಸ್ಥಾನಗಳಲ್ಲಿ ಮತದಾನ ನಡೆದಿದ್ದು, ಎಲ್ಲ ಕ್ಷೇತ್ರಗಳಲ್ಲಿ ಮತ ಚಲಾಯಿಸಿದ ಮಹಿಳಾ ಮತದಾರರ ಶೇಕಡಾವಾರು ಪಾಲು ಅಧಿಕ. ಒಡಿಶಾದಲ್ಲಿ ಮತದಾನ ನಡೆದ ಒಂಬತ್ತು ಕ್ಷೇತ್ರಗಳ ಪೈಕಿ ಐದರಲ್ಲಿ ಈ ಪ್ರವೃತ್ತಿ ಕಂಡುಬಂದಿದೆ. ಪಶ್ಚಿಮ ಬಂಗಾಳದಲ್ಲಿ ಮತದಾನ ನಡೆದ 25 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಕೂಡಾ ಮತದಾನ ಮಾಡಿದ ಮಹಿಳೆಯರ ಶೇಕಡಾವಾರು ಪ್ರಮಾಣ ಅಧಿಕ.

ಕೇರಳ ಹಾಗೂ ತಮಿಳುನಾಡಿನ ಅರ್ಧದಷ್ಟು ಕ್ಷೇತ್ರಗಳಲ್ಲಿ ಕೂಡಾ ಇದೇ ಪ್ರವೃತ್ತಿ ಕಂಡುಬಂದಿದ್ದರೆ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ ಒಟ್ಟು ಮತ ಚಲಾಯಿಸಿದವರಲ್ಲಿ ಪುರುಷರ ಸಂಖ್ಯೆ ಅಧಿಕ.

"ಈ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಮಹಿಳೆಯರ ಮತದಾನ ಪ್ರಮಾಣ ಅಧಿಕವಾಗಿರುವುದು ಕಂಡುಬಂದಿದೆ. ಕಲ್ಯಾಣ ಯೋಜನೆಗಳ ಫಲಾನುಭವಿಗಳಲ್ಲಿ ಸಿಂಹಪಾಲು ಮಹಿಳೆಯರದ್ದು. 1993ರಲ್ಲಿ ಪಂಚಾಯತ್‍ರಾಜ್ ಕಾಯ್ದೆ ಜಾರಿಯಾದ ಬಳಿಕ ಮಹಿಳೆಯರ ರಾಜಕೀಯ ಆಕಾಂಕ್ಷೆಗಳು ಕೂಡಾ ಹೆಚ್ಚಿವೆ. ಇದು ಮಹಿಳೆಯರು ತಮ್ಮದೇ ಸ್ವಂತ ನಿರ್ಧಾರ ಕೈಗೊಳ್ಳಲು ಹಾಗೂ ರಾಜಕೀಯವಾಗಿ ಹೆಚ್ಚು ಪ್ರಜ್ಞಾವಂತರಾಗಲು ಕಾರಣವಾಗಿದೆ" ಎಂದು ಸೆಂಟರ್ ಫಾರ್ ಸೋಶಿಯಲ್ ರೀಸರ್ಚ್ ನಿರ್ದೇಶಕಿ ರಂಜನಾ ಕುಮಾರಿ ಹೇಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News