ಚೀನಾ ನಮ್ಮ ಭೂಮಿಯನ್ನು ಅತಿಕ್ರಮಿಸುತ್ತಿದ್ದರೂ ಪ್ರಧಾನಿ ಮೋದಿ ಮೌನವಾಗಿದ್ದಾರೆ : ಖರ್ಗೆ

Update: 2024-05-25 16:51 GMT

 ಮಲ್ಲಿಕಾರ್ಜುನ ಖರ್ಗೆ | ANI 

ಶಿಮ್ಲಾ : ಚೀನಾ ಭಾರತದ ಭೂಮಿಯನ್ನು ಅತಿಕ್ರಮಿಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಆರೋಪಿಸಿದರು.

ಶನಿವಾರ ಹಿಮಾಚಲ ಪ್ರದೇಶದ ರೋಹ್ರುದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಖರ್ಗೆ,‘ನಾವು ಪಾಕಿಸ್ತಾನದ ವಿರುದ್ಧ ಹೋರಾಡಿದ್ದೇವೆ ಮತ್ತು ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದೇವೆ. ಈಗ ಚೀನಾ ನಮ್ಮ ಭೂಮಿಯನ್ನು ಅತಿಕ್ರಮಿಸುತ್ತಿದೆ ಮತ್ತು ಅಲ್ಲಿ ಮನೆಗಳು ಹಾಗೂ ರಸ್ತೆಗಳನ್ನು ನಿರ್ಮಿಸುತ್ತಿದೆ. ಪ್ರಧಾನಿ ಮೋದಿಯವರು ಈ ಬಗ್ಗೆ ಮೌನವಾಗಿದ್ದಾರೆ. ‘56 ಇಂಚಿನ ಎದೆ ’ಎಲ್ಲಿದೆ ’ ಎಂದು ಪ್ರಶ್ನಿಸಿದರು.

2023ರ ವಿನಾಶಕಾರಿ ಪ್ರವಾಹದ ಬಳಿಕ ಹಿಮಾಚಲ ಪ್ರದೇಶಕ್ಕೆ ನೆರವು ಒದಗಿಸುವಲ್ಲಿ ಕೇಂದ್ರದ ನಿರ್ಲಕ್ಷ್ಯವನ್ನು ಆರೋಪಿಸಿದ ಅವರು,ರಾಜ್ಯದ ಮುಖ್ಯಮಂತ್ರಿಗಳು 10,000 ಕೋಟಿ ರೂ.ಗಳ ನೆರವಿಗಾಗಿ ಮೊರೆಯಿಟ್ಟಿದ್ದರು. ಆದರೆ ಈ ಬಗ್ಗೆ ಕೇಂದ್ರವು ತೀರ ಅಸಡ್ಡೆ ಪ್ರದರ್ಶಿಸಿತ್ತು ಎಂದರು.

ಕಾಂಗ್ರೆಸ್ ದೇಶ ಮತ್ತು ಅದರ ಸಂವಿಧಾನದ ರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದ ಖರ್ಗೆ,ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ 30 ಲಕ್ಷ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಲಿದೆ ಎಂದು ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News