ಪ್ರಧಾನಿ ಮೋದಿ ಕಾನೂನು ಮತ್ತು ನಿಯಮಗಳಿಗೆ ಒಳಪಟ್ಟಿಲ್ಲವೆ?: ಪ್ರಧಾನಿಯ ಧ್ಯಾನದ ಚಿತ್ರಗಳ ಕುರಿತು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರಶ್ನೆ

Update: 2024-06-01 09:39 GMT

ದಿಗ್ವಿಜಯ್ ಸಿಂಗ್ , ನರೇಂದ್ರ ಮೋದಿ | PC : PTI 

ಭೋಪಾಲ್: ಪ್ರಧಾನಿ ಮೋದಿಯು ಕಾನೂನು ಹಾಗೂ ನಿಯಮಗಳಿಗೆ ಒಳಪಟ್ಟಿಲ್ಲವೆ ಎಂದು ಶನಿವಾರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಧ್ಯಾನಮಂದಿರದ ಭಾವಚಿತ್ರಗಳ ಕುರಿತು ಪ್ರಶ್ನೆಂಯೆತ್ತಿದ್ದಾರೆ.

ಇದರೊಂದಿಗೆ, ಪ್ರಧಾನ ಮಂತ್ರಿಗಳ ಕಾರ್ಯಾಲಯವು ಈ ಕುರಿತು ಉತ್ತರ ನೀಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಶನಿವಾರ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಎಕ್ಸ್ ಬಳಕೆದಾರರಾದ ಕಪಿಲ್ ಎಂಬುವವರ ಪೋಸ್ಟ್ ಅನ್ನು ಉಲ್ಲೇಖಿಸಿ ಪೋಸ್ಟ್ ಮಾಡಿರುವ ದಿಗ್ವಿಜಯ್ ಸಿಂಗ್, “ನೀವು ಇದರತ್ತ ಬೊಟ್ಟು ಮಾಡಿರುವುದಕ್ಕೆ ಧನ್ಯವಾದಗಳು. ನರೇಂದ್ರ ಮೋದಿ ಕಾನೂನಿಗೆ ಒಳಪಟ್ಟಿಲ್ಲವೆ ಅಥವಾ ನಿಯಮಗಳು ಅವರಿಗೆ ಅನ್ವಯವಾಗುವುದಿಲ್ಲವೆ? ಈ ಕುರಿತು ಪ್ರಧಾನ ಮಂತ್ರಿಗಳ ಕಾರ್ಯಾಲಯವು ಪ್ರತಿಕ್ರಿಯಿಸುವುದೆ?” ಎಂದು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ಮೋದಿಯ ಧ್ಯಾನ ಭಂಗಿಯ ಭಾವಚಿತ್ರಗಳನ್ನು ಹಂಚಿಕೊಂಡಿದ್ದ ಕಪಿಲ್ ಎಂಬ ಬಳಕೆದಾರರೊಬ್ಬರು, “ವಿವೇಕಾನಂದ ಸ್ಮಾರಕದಲ್ಲಿ ಛಾಯಾಗ್ರಹಣ ನಡೆಸಲು ಅನುಮತಿಯಿಲ್ಲ ಹಾಗೂ ಕಾನೂನಿನ ಪ್ರಕಾರ, ಇದೊಂದು ದಂಡನಾರ್ಹ ಅಪರಾಧವಾಗಿದೆ. ಹೀಗಿದ್ದೂ ಇದೇ ಪ್ರಥಮ ಬಾರಿಗೆ ನೀವು ವಿವೇಕಾನಂದ ಸ್ಮಾರಕದಲ್ಲಿನ ಧ್ಯಾನಮಂದಿರದ ಭಾವಚಿತ್ರಗಳನ್ನು ನೋಡುತ್ತಿದ್ದೀರಿ. ಆದರೆ, ಕ್ಯಾಮೆರಾ ಇಲ್ಲದೆ ಕ್ಯಾಮೆರಾ ಜೀವಿ ಬದುಕುವುದಾದರೂ ಹೇಗೆ?” ಎಂದು ತೀಕ್ಷ್ಣವಾಗಿ ವ್ಯಂಗ್ಯವಾಡಿದ್ದರು.

ವಿವೇಕಾನಂದ ಸ್ಮಾರಕದ ಧ್ಯಾನಮಂದಿರದಲ್ಲಿ ಪ್ರಧಾನಿ ಮೋದಿ ನಡೆಸುತ್ತಿರುವ 45 ಗಂಟೆಗಳ ಧ್ಯಾನವು ಗುರುವಾರ ಪ್ರಾರಂಭಗೊಂಡಿದ್ದು, ಇಂದು ಸಂಜೆ ಮುಕ್ತಾಯಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News