ಆರ್ ಜಿ ಕರ್ ಪ್ರಕರಣ | ಆರೋಪಿಯ ಧ್ವನಿ ಪತ್ರಕರ್ತರಿಗೆ ಕೇಳದಂತೆ ಜೋರಾಗಿ ವಾಹನದ ಹಾರ್ನ್ ಮಾಡುತ್ತಿದ್ದ ಪೊಲೀಸರು!
ಕೋಲ್ಕತ್ತಾ : ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ ನನ್ನು ಸೀಲ್ದಾ ನ್ಯಾಯಾಲಯಕ್ಕೆ ಕರೆತಂದಾಗ ಪೊಲೀಸರು ಆರೋಪಿ ಮಾತನಾಡುವ ಧ್ವನಿ ಪತ್ರಕರ್ತರಿಗೆ ಕೇಳದಂತೆ ಜೋರಾಗಿ ವಾಹನದ ಹಾರ್ನ್ ಮಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ನವೆಂಬರ್ 11ರಂದು ಸೀಲ್ದಾ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಅವರನ್ನು ಜೈಲಿನ ವ್ಯಾನ್ ನಿಂದ ಕೆಳಕ್ಕೆ ಇಳಿಸಿದಾಗ, ಕೋಲ್ಕತ್ತಾದ ಮಾಜಿ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ವಿರುದ್ಧ ರಾಯ್ ಕೆಲವು ಟೀಕೆಗಳನ್ನು ಮಾಡಿದ್ದರು ಮತ್ತು ನಾನು ನಿರಪರಾಧಿ ಎಂದು ಹೇಳಿದ್ದರು. ಸೋಮವಾರ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ರಾಯ್ ಮಾತನಾಡುವ ಧ್ವನಿ ಪತ್ರಕರ್ತರಿಗೆ ಕೇಳದಂತೆ ಪೊಲೀಸರು ನಿರಂತರವಾಗಿ ವಾಹನದ ಹಾರ್ನ್ ಮಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ತವ್ಯ ನಿರತ ವೈದ್ಯೆಯ ಮೃತದೇಹ ಆಗಸ್ಟ್ 9ರಂದು ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಪತ್ತೆಯಾಗಿತ್ತು. ಘಟನೆಯು ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಅನಿರ್ಬನ್ ದಾಸ್ ನೇತೃತ್ವದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಇದುವರೆಗೆ ಒಂಬತ್ತು ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕೋಲ್ಕತ್ತಾ ಹೈಕೋರ್ಟ್ ನ ಆದೇಶದ ಮೇರೆಗೆ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.