ಒಡಿಶಾ | ದೆಬ್ರಿಗಢ ವನ್ಯಜೀವಿ ಧಾಮದಲ್ಲಿ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಕಾಡೆಮ್ಮೆಗಳ ಗಣತಿ
ಬಾರ್ಗಢ : ನವೆಂಬರ್ 12 ಮತ್ತು 13ರಂದು ದೇಶದಲ್ಲೇ ಪ್ರಪ್ರಥಮ ಬಾರಿಗೆ ದೆಬ್ರಿಗಢ ವನ್ಯಜೀವಿ ಧಾಮದಲ್ಲಿ ಕಾಡೆಮ್ಮೆಗಳ ಗಣತಿ ದಾಖಲಾತಿ ನಡೆದಿದೆ.
ಪಶ್ಚಿಮ ಒಡಿಶಾದ ಬಾರ್ಗಢ ಜಿಲ್ಲೆಯಲ್ಲಿರುವ ಈ ವನ್ಯಜೀವಿ ಧಾಮಕ್ಕೆ ಪ್ರತಿ ವರ್ಷ ಸುಮಾರು 70,000 ಪ್ರವಾಸಿಗರು ಭೇಟಿ ನೀಡುತ್ತಾರೆ. ವನ್ಯಜೀವಿ ರಕ್ಷಣೆ ಕಾಯ್ದೆ 1972 ಅಡಿ ಭಾರತೀಯ ಕಾಡೆಮ್ಮೆಗಳನ್ನು ಪ್ರವರ್ಗ ಒಂದರಲ್ಲಿ ವರ್ಗೀಕರಿಸಲಾಗಿದ್ದು, ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣೆ ಸಂಘಟನೆಯ ಕೆಂಪು ಪಟ್ಟಿಯಲ್ಲಿ ದುರ್ಬಲ ವರ್ಗಕ್ಕೆ ಸೇರ್ಪಡೆ ಮಾಡಲಾಗಿದೆ. ವಿಶ್ವದ ಶೇ. 85ರಷ್ಟು ಕಾಡೆಮ್ಮೆಗಳು ಭಾರತವೊಂದರಲ್ಲೇ ಕಂಡು ಬರುತ್ತವೆ. ಭಾರತದಲ್ಲಿ ಅವುಗಳ ಸಂಖ್ಯೆ 15,000-20,000 ನಡುವೆ ಇದೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.
"ನಮ್ಮ ವನ್ಯಜೀವಿ ಧಾಮದಲ್ಲಿ 210 ಅಪ್ತಾಪ್ತ ವಯಸ್ಸಿನ ಕಾಡೆಮ್ಮೆಗಳು ಸೇರಿದಂತೆ ಒಟ್ಟು 659 ಭಾರತೀಯ ಕಾಡೆಮ್ಮೆಗಳಿವೆ. ಸದ್ಯ ವನ್ಯಜೀವಿ ಧಾಮದಲ್ಲಿರುವ ಕಾಡೆಮ್ಮೆಗಳ ಸಂಖ್ಯೆಯನ್ನು ಲೆಕ್ಕ ಹಾಕಲು ನವೆಂಬರ್ 12 ಹಾಗೂ 13ರಂದು ದೆಬ್ರಿಗಢ ವನ್ಯಜೀವಿ ಧಾಮದಲ್ಲಿ ಗಣತಿ ಕಾರ್ಯ ನಡೆಸಲಾಯಿತು. ಇದು ಒಡಿಶಾ ಮತ್ತು ದೆಬ್ರಿಗಢದಲ್ಲೇ ಪ್ರಪ್ರಥಮ ಗಣತಿಯಾಗಿದೆ. ಕಾಡೆಮ್ಮೆಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸಲಿದ್ದಾರೆ ಎಂದು ನಾವು ಭಾವಿಸಿದ್ದೇವೆ" ಎಂದು ಹಿರಾಕುಡ್ ವನ್ಯಜೀವಿ ವಿಭಾಗದ ವಿಭಾಗೀಯ ಅರಣ್ಯಾಧಿಕಾರಿ ಅನ್ಷು ಪ್ರಗ್ಯಾನ್ ದಾಸ್ The Telegraph ಗೆ ತಿಳಿಸಿದ್ದಾರೆ.