ರಾಜಕಾರಣಿಗಳು, ಅಧಿಕಾರಿಗಳು ಜನರ ವಿಶ್ವಾಸವನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ: ಸುಪ್ರೀಂ ಕೋರ್ಟ್‌ ಆಕ್ರೋಶ

Update: 2024-03-06 08:02 GMT

ಹೊಸದಿಲ್ಲಿ: ಉತ್ತರಾಖಂಡದಲ್ಲಿರುವ ಜಿಮ್‌ ಕಾರ್ಬೆಟ್‌ ನ್ಯಾಷನಲ್‌ ಪಾರ್ಕ್‌ನಲ್ಲಿ ಅಕ್ರಮ ನಿರ್ಮಾಣ ಮತ್ತು ಮರಗಳ ಕಡಿಯುವಿಕೆಗೆ ಸಂಬಂಧಿಸಿದಂತೆ ಮೂರು ತಿಂಗಳೊಳಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್‌ ಇಂದು ಸೂಚನೆ ನೀಡಿದೆ. “ಅಧಿಕಾರಿಗಳು ಮತ್ತು ರಾಜಕಾರಣಿಗಳು ಜನರ ವಿಶ್ವಾಸವನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ,” ಎಂದು ಈ ಆದೇಶ ನೀಡುವಾಗ ಸುಪ್ರೀಂ ಕೋರ್ಟ್‌ ಕಟು ಪದಗಳನ್ನು ಬಳಸಿದೆ.

ಉತ್ತರಾಖಂಡದ ಮಾಜಿ ಸಚಿವ ಹರಕ್‌ ಸಿಂಗ್‌ ರಾವತ್‌ ಮತ್ತು ಅರಣ್ಯಾಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ನಿರ್ಮಾಣ ಮತ್ತು ಮರಗಳ ಕಡಿತಕ್ಕೆ ನೀಡಿದ್ದ ಅನುಮತಿಯನ್ನು ಸುಪ್ರೀಂ ಕೋರ್ಟ್‌ ಖಂಡಿಸಿದೆ.

“ಅವರು (ರಾವತ್‌ ಮತ್ತು ಚಾಂದ್)‌ ಕಾನೂನನ್ನು ಉಲ್ಲಂಘಿಸಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹದ ನೆಪದಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಸಾಮೂಹಿಕ ಮರಗಳ ಕಡಿತಕ್ಕೆ ಅನುಮತಿಸಿದ್ದರು,” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಹರಕ್‌ ಸಿಂಗ್‌ ರಾವತ್‌ಗೆ ನಂಟು ಹೊಂದಿದ ಅರಣ್ಯ ಹಗರಣವೊಂದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇತ್ತೀಚೆಗೆ ದಿಲ್ಲಿ, ಉತ್ತರಾಖಂಡ ಮತ್ತು ಚಂಡೀಗಢದ 17 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ರಾವತ್‌ ಅವರ ಡಿಫೆನ್ಸ್‌ ಕಾಲನಿ ನಿವಾಸ ಮತ್ತು ಡೆಹ್ರಾಡೂನ್‌ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲೂ ಇಡಿ ಶೋಧ ನಡೆಸಿತ್ತು.

ಕಾರ್ಬೆಟ್‌ ನ್ಯಾಷನಲ್‌ ಪಾರಕ್‌ ವ್ಯಾಪ್ತಿ ಪಖ್ರೋ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2019ರಲ್ಲಿ ಸಾವಿರಾರು ಮರಗಳ ಮಾರಣಹೋಮ, ಆರ್ಥಿಕ ಅವ್ಯವಹಾರಗಳು ಮತ್ತು ಅಕ್ರಮ ನಿರ್ಮಾಣ ಕುರಿತ ಪ್ರಕರಣ ಸಂಬಂಧ ಈಡಿ ದಾಳಿ ನಡೆಸಿತ್ತು. ರಾವತ್‌ ಅವರು ಆಗಿನ ಬಿಜೆಪಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದಾಗ ಪಖ್ರೋ ಹುಲಿ ಸಂರಕ್ಷಿತ ಪ್ರದೇಶ ಅಭಿವೃದ್ಧಿ ಅವರ ನೆಚ್ಚಿನ ಯೋಜನೆಯಾಗಿತ್ತು. ಆದರೆ 2022 ಉತ್ತರಾಖಂಡ ವಿಧಾನಸಭಾ ಚುನಾವಣೆ ವೇಳೆ ಅವರು ಕಾಂಗ್ರೆಸ್‌ ಸೇರಿದ್ದರು. ಇದಕ್ಕೂ ಮುನ್ನ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅವರನ್ನು ರಾಜ್ಯ ಸಂಪುಟದಿಂದ ವಜಾಗೊಳಿಸಲಾಗಿತ್ತಲ್ಲದೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಅವರನ್ನು ಅಮಾನತುಗೊಳಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News