ಪ್ರಧಾನಿ ಮೋದಿಯನ್ನು ಹೊಗಳುವವರ ಸಾಲಿಗೆ ಸೇರಿದ ರೈತಪರ ಧ್ವನಿ ಹಾಗೂ ಹಿರಿಯ ಶಿರೋಮಣಿ ಅಕಾಲಿ ದಳ ನಾಯಕ ಸಿಕಂದರ್ ಸಿಂಗ್ ಮಲುಕ
ಹೊಸದಿಲ್ಲಿ: ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಸಚಿವ ಹಾಗೂ ಹಿರಿಯ ಶಿರೋಮಣಿ ಅಕಾಲಿ ದಳ ನಾಯಕ ಸಿಕಂದರ್ ಸಿಂಗ್ ಮಲುಕ ಪಂಜಾಬ್ ನಲ್ಲಿನ ಲೋಕಸಭಾ ಚುನಾವಣೆಗೆ ಇನ್ನು ಒಂದು ವಾರ ಬಾಕಿ ಇರುವಾಗ ಯೂ ಟರ್ನ್ ಹೊಡೆದಿದ್ದು, ಪ್ರಧಾನಿ ನರೇಂದ್ರ ಮೋದಿಯ ಮೇಲೆ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ.
ಶನಿವಾರ ಬೆಳಗ್ಗೆ ವಿಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಮಲುಕ, ಸಿಖ್ ಸಮುದಾಯದ ತ್ಯಾಗವನ್ನು ವಿವರಿಸಿದ್ದು, ಈ ಸಂದರ್ಭದಲ್ಲಿ ಸಿಖ್ ಸಮುದಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಎಷ್ಟು ದೊಡ್ಡ ಮಟ್ಟದ ಕೆಲಸಗಳನ್ನು ಮಾಡಿದ್ದಾರೆ ಎಂಬ ಕುರಿತೂ ಪ್ರಸ್ತಾಪಿಸಿದ್ದಾರೆ.
ಬಟಿಂಡಾ ಲೋಕಸಭಾ ಕ್ಷೇತ್ರದಿಂದ ಮಲುಕ ಅವರ ಸೊಸೆ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಪರಂಪಲ್ ಕೌರ್ ಸಿಧು ಮಲುಕ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದರಿಂದ, ತಮ್ಮ ಸ್ವಪಕ್ಷವಾದ ಅಕಾಲಿದಳದ ರಾಜಕೀಯ ನಿಲುವಿನ ಹೊರಗಾಗಿಯೂ ಮಲುಕು ಇಂತಹ ನಡೆ ಪ್ರದರ್ಶಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಮೇ 23ರಂದು ಪ್ರಣೀತ್ ಕೌರ್ ಹಾಗೂ ಇನ್ನಿತರ ಅಭ್ಯರ್ಥಿಗಳ ಪರವಾಗಿ ಪಟಿಯಾಲದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿಯೊಂದಿಗೆ ಪರಂಪಲ್ ಕೌರ್ ಸಿಧು ಮಲುಕ ಕೂಡಾ ಉಪಸ್ಥಿತರಿದ್ದರು.
“ನಾನು ಹೇಳುತ್ತಿರುವುದನ್ನು ಹಲವಾರು ಮಂದಿ ಇಷ್ಟಪಡುವುದಿಲ್ಲ ಎಂಬುದನ್ನು ನಾನು ಬಲ್ಲೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಸಿಖ್ ಸಮುದಾಯಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ ಹಾಗೂ ನಾವು ಅದಕ್ಕಾಗಿ ಅವರನ್ನು ಅಭಿನಂದಿಸುವುದನ್ನು ಕಲಿಯಬೇಕು ಎಂಬುದು ನನ್ನ ಭಾವನೆಯಾಗಿದೆ. ಸಿಖ್ ಕೇಂದ್ರಿತ ರಾಜಕೀಯ ಪಕ್ಷಗಳು ಪ್ರಮುಖವಾಗಿ ಸದ್ಯ ನಡೆಯುತ್ತಿರುವ ರೈತರ ಪ್ರತಿಭಟನೆಯ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಚುನಾವಣಾ ಒಪ್ಪಂದ ಮಾಡಿಕೊಳ್ಳಲು ಸಾಧ್ಯೆವಾಗಿರದಿದ್ದರೂ, ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ, ನಾವದನ್ನು ಅಭಿನಂದಿಸಬೇಕು” ಎಂದು ಹೇಳಿದ್ದಾರೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಿಕಂದರ್ ಸಿಂಗ್ ಮಲುಕ ಕಳೆದ 50 ವರ್ಷಗಳಿಂದ ಶಿರೋಮಣಿ ಅಕಾಲಿ ದಳದೊಂದಿಗೆ ಗುರುತಿಸಿಕೊಂಡಿದ್ದಾರೆ.
ಜೂನ್ 1ರಂದು ನಡೆಯಲಿರುವ ಏಳನೆ ಮತ್ತು ಅಂತಿಮ ಹಂತದ ಚುನಾವಣೆಯಲ್ಲಿ ಪಂಜಾಬ್ ನ ಎಲ್ಲ 13 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.