ಪಂಜಾಬ್ | ಗ್ರಾಮ ಸರಪಂಚ್‌ ಹುದ್ದೆ 2 ಕೋಟಿ ರೂ.ಗೆ ಹರಾಜು!

Update: 2024-10-01 16:07 GMT

ಸಾಂದರ್ಭಿಕ ಚಿತ್ರ

ಚಂಡೀಗಡ : ಪಂಜಾಬ್‌ನ ಗುರುದಾಸಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಸರಪಂಚ್‌’ ಹುದ್ದೆಯೊಂದು 2 ಕೋಟಿ ಹರಾಜರಾಗಿದ್ದು, ಹಲವಾರು ರಾಜಕೀಯ ನಾಯಕರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಬಿಜೆಪಿಯ ಸ್ಥಳೀಯ ಮುಖಂಡ ಆತ್ಮಸಿಂಗ್ ಎಂಬವರು 2 ಕೋಟ ರೂ. ಬಿಡ್ ಸಲ್ಲಿಸಿ, ಹರಾಜನ್ನು ಗೆದ್ದಿದ್ದಾರೆಂದು ತಿಳಿದುಬಂದಿದೆ. ಪ್ರಜಾತಾಂತ್ರಿಕ ನಿಯಮಗಳನ್ನು ಉಲ್ಲಂಘಿಸಿ ಸರಪಂಚ್‌ ಹುದ್ದೆಗೆ ನಡೆದ ಈ ಬಿಡ್ಡಿಂಗ್ ಹರ್ದೊವಾಲ್ ಕಲಾನ್ ಗ್ರಾಮದಲ್ಲಿ ನಡೆದಿದೆ. ಪಂಜಾಬ್ ರಾಜ್ಯದ ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಮುಂಚಿತವಾಗಿ ಈ ಬಿಡ್ಡಿಂಗ್ ನಡೆದಿದೆ.

50 ಲಕ್ಷ ರೂ.ನಿಂದ ಆರಂಭಗೊಂಡ ಬಿಡ್ ತರುವಾಗ 2 ಕೋಟಿ ರೂ.ವರೆಗೂ ತಲುಪಿದೆ. ಬಿಜೆಪಿ ನಾಯಕ ಆತ್ಮ ಸಿಂಗ್ ಚೆಕ್ ಮೂಲಕವೇ ಈ ಅತ್ಯಧಿಕ ಮೊತ್ತದ ಬಿಡ್ಡಿಂಗ್ ಸಲ್ಲಿಸಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಗರಿಷ್ಠ ಹಣಕಾಸು ನಿಧಿಯನ್ನು ಒದಗಿಸಬಹುದಾದ ವ್ಯಕ್ತಿಯನ್ನು ಸರಪಂಚ್‌ನಾಗಿ ಆಯ್ಕೆ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದರೆನ್ನಲಾಗಿದೆ.

ಹರಾಜಿನಲ್ಲಿ ಮೂಲಕ ಪಡೆದ ಹಣವನ್ನು ಹರ್ದೊವಾಲ್ ಕಲಾನ್ ಗ್ರಾಮ ಗ್ರಾಮದ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಆತ್ಮಸಿಂಗ್ ಹೇಳಿದ್ದಾರೆ. ಗ್ರಾಮಸ್ಥರನ್ನೊಳಗೊಂಡ ಸಮಿತಿಯು ನಿಧಿಗಳ ಅನುದಾನದ ಮೇಲ್ವಿಚಾರಣೆಯನ್ನು ನಡೆಸಲಿದೆ. ಆತ್ಮ ಸಿಂಗ್ ಅವರ ತಂದೆಯೂ ಇದೇ ಗ್ರಾಮದಲ್ಲಿ ಸರಪಂಚ್‌ ಆಗಿದ್ದರು.

ಹರ್ದೊವಾಲ್ ಕಲಾನ್, ಗುರುದಾಸ್‌ಪುರ ಜಿಲ್ಲೆಯ ಅತಿದೊಡ್ಡ ಗ್ರಾಮಗಳಲ್ಲೊಂದಾಗಿದ್ದು, 350 ಎಕರೆ ಪಂಚಾಯತ್ ನಿವೇಶನವನ್ನು ಹೊಂದಿದೆ, ಪಂಜಾಬ್ ಇನ್ನೊಂದು ಜಿಲ್ಲೆಯಾದ ಭಟಿಂಡಾದ ಗೆಹ್ರಿ ಬುಟ್ಟರ್ ಗ್ರಾಮದಲ್ಲಿಯೂ ಸರಪಂಚ್‌ ಹುದ್ದೆ ಗಿಟ್ಟಿಸಲು 60 ಲಕ್ಷ ರೂ. ನೀಡುವ ಕೊಡುಗೆಯನ್ನು ಆಕಾಂಕ್ಷಿಯೊಬ್ಬರು ನೀಡಿದ್ದರೆನ್ನಲಾಗಿದೆ.

ಸರಪಂಚ್‌ ಹುದ್ದೆಯನ್ನು ಹರಾಜಿಗಿಡುವುದನ್ನು ಪಂಜಾಬ್ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ತೀವ್ರವಾಗಿ ಖಂಡಿಸಿದ್ದಾರೆ. ಈ ಕೃತ್ಯದಲ್ಲಿ ಶಾಮೀಲಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News