ಪಂಜಾಬ್ ಕಳ್ಳಭಟ್ಟಿ ದುರಂತ : ಸಾವಿನ ಸಂಖ್ಯೆ 21ಕ್ಕೇರಿಕೆ

Update: 2024-03-23 17:13 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಪಂಜಾಬ್ ನ ಸಂಗ್ರೂರ್ ಜಿಲ್ಲೆಯಲ್ಲಿ ಕಳ್ಳಭಟ್ಟಿ ಮದ್ಯ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ 21ಕ್ಕೇರಿದೆ. ಕನಿಷ್ಠ 40 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆಯೆಂದು ತಿಳಿದುಬಂದಿದೆ.

ಸಂಗ್ರೂರ್ನಲ್ಲಿ ಬುಧವಾರ ಕಳ್ಳಭಟ್ಟಿ ಮದ್ಯಸೇವಿಸಿದ ನಾಲ್ವರು ಆಸುನೀಗಿದ್ದರು. ಹಲವಾರು ಅಸ್ವಸ್ಥಗೊಂಡಿದ್ದರು. ಮಾರನೆಯ ದಿನ ಪಾಟಿಯಾಲದ ರಾಜೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನೂ ನಾಲ್ವರು ಆಸುನೀಗಿದ್ದರು. ಶುಕ್ರವಾರ ಎಂಟು ಮಂದಿ ಹಾಗೂ ಶನಿವಾರ ಐವರು ಕೊನೆಯುಸಿರೆಳೆಯುವುದರೊಂದಿಗೆ ಕಳ್ಳಭಟ್ಟಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೇರಿದೆ.

ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲು ಪಂಜಾಬ್ ಸರಕಾರವು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು, ಸುವ್ಯವಸ್ಥೆ) ಗುರೀಂದರ್ ದಿಲ್ಲೋನ್ ಹಾಗೂ ಪಾಟಿಯಾಲ ಡಿಐಜಿ ವಲಯದ ಹರಚರಣ್ ಭುಲ್ಲರ್ ನೇತೃತ್ವದಲ್ಲಿ ಉನ್ನತ ಮಟ್ಟದ ವಿಶೇಷ ತನಿಖಾ ತಂಡವನ್ನು ರಚಿಸಿದೆಯೆಂದು ಮೂಲಗಳು ತಿಳಿಸಿವೆ.

ಈ ದುರಂತಕ್ಕೆ ಕಾರಣರಾದ ಯಾರನ್ನೂ ಕೂಡಾ ಬಿಡದೆ ಶಿಕ್ಷಿಸಲಾಗುವುದು. ಜನತೆ ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ ಹಾಗೂ ಸೌಹಾರ್ದವನ್ನು ಕಾಪಾಡುವಂತೆ ಪ್ರತಿಯೊಬ್ಬರಿಗೂ ಮನವಿ ಮಾಡುವುದಾಗಿ ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News