ಸಂಸತ್ತಿನಲ್ಲಿ ನಿಮ್ಮ ವಯಸ್ಸನ್ನಾದರೂ ತೊಡಗಿಸಿ: ತೃಣಮೂಲ ಸಂಸದರನ್ನು ಲೇವಡಿ ಮಾಡಿದ ಅಮಿತ್ ಶಾ

Update: 2023-09-20 15:03 GMT

Photo- PTI

ಹೊಸದಿಲ್ಲಿ: ಕೇಂದ್ರ ಸರ್ಕಾರದಲ್ಲಿ ಇತರೆ ಹಿಂದುಳಿದ ವರ್ಗಗಳ ನಾಯಕರು ಹಾಗೂ ನೌಕರರಿಗೆ ನಿಗದಿಗಿಂತ ಕಡಿಮೆ ಪ್ರಾತಿನಿಧ್ಯವಿದೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್ ವಿರುದ್ಧ ಮುಗಿಬಿದ್ದ ಘಟನೆ ಬುಧವಾರ ಸಂಸತ್ತಿನಲ್ಲಿ ನಡೆಯಿತು ಎಂದು ndtv.com ವರದಿ ಮಾಡಿದೆ.

ಸಂಸತ್ತನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರದಲ್ಲಿನ 90 ಕಾರ್ಯದರ್ಶಿ ಹುದ್ದೆಗಳ ಪೈಕಿ ಕೇವಲ ಮೂರು ಮಂದಿ ಮಾತ್ರ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ್ದಾರೆ ಎಂದು ಆರೋಪಿಸಿದರು. ಆದಷ್ಟೂ ಶೀಘ್ರ ಜಾತಿ ಜನಗಣತಿ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಮಿತ್ ಶಾ, “ಕೆಲವು ಸರ್ಕಾರೇತರ ಸಂಸ್ಥೆಗಳು ಪ್ರಶ್ನೆಗಳನ್ನೊಳಗೊಂಡ ಚೀಟಿಯನ್ನು ನೀಡುತ್ತವೆ. ಅವರದನ್ನು ಇಲ್ಲಿ ಓದುತ್ತಾರೆ” ಎಂದು ಕಿಡಿ ಕಾರಿದರು.

ತಾವು ಮಾತನಾಡುವಾಗ ಮಧ್ಯಪ್ರವೇಶಿಸಿ ಮಾತನಾಡಲು ಯತ್ನಿಸಿದ ಸೌಗತ ರಾಯ್ ಅವರ ಮಾತನ್ನು ತಡೆದ ಅಮಿತ್ ಶಾ, “ನೂತನ ಸಂಸತ್ ಭವನದಲ್ಲಿ ನೀವು ಕನಿಷ್ಠ ನಿಮ್ಮ ವಯಸ್ಸನ್ನು ತೊಡಗಿಸಬೇಕು” ಎಂದು ಲೇವಡಿ ಮಾಡಿದರು.

ಅಮಿತ್ ಶಾ ಉತ್ತರಿಸಲು ನಿಂತಾಗ, ಅದಾಗಲೇ ರಾಹುಲ್ ಗಾಂಧಿ ಸದನವನ್ನು ತೊರೆದಿದ್ದರು.

“ಕೆಲವು ವ್ಯಕ್ತಿಗಳು ದೇಶವನ್ನು ಕಾರ್ಯದರ್ಶಿಗಳು ಮುನ್ನಡೆಸುತ್ತಾರೆ ಎಂದು ತಿಳಿದಿದ್ದಾರೆ. ಆದರೆ, ದೇಶವನ್ನು ಸರ್ಕಾರ ಮುನ್ನಡೆಸುತ್ತದೆ ಎಂದು ನಾನು ತಿಳಿದಿದ್ದೇನೆ. ಬಿಜೆಪಿಯ 85 ಸಂಸದರು ಹಾಗೂ 29 ಸಚಿವರು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ್ದಾರೆ” ಎಂದು ತಿರುಗೇಟು ನೀಡಿದ ಅಮಿತ್ ಶಾ, ನಾವು ಇತರೆ ಹಿಂದುಳಿದ ವರ್ಗಗಳ ಪರವಾಗಿ ಮಾತನಾಡುತ್ತಿದ್ದೇವೆ ಎಂದು ಪ್ರತಿಪಾದಿಸುತ್ತಿರುವವರು, ಇತರೆ ಹಿಂದುಳಿದ ವರ್ಗದ ಪ್ರಧಾನಿಯನ್ನು ನೀಡಿದ್ದು ಬಿಜೆಪಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News