ʼಹ್ಯಾರಿ ಪಾಟರ್ʼ ಖ್ಯಾತಿಯ ಬ್ಲೂಮ್ಸ್ ಬರಿ ಇಂಡಿಯಾ ಪ್ರಕಾಶನ ಸಂಸ್ಥೆಯ ನೂತನ ಮುಖ್ಯಸ್ಥರಾಗಿ ರಾಹುಲ್ ಶ್ರೀವಾಸ್ತವ ನೇಮಕ
ಹೊಸದಿಲ್ಲಿ : ʼಹ್ಯಾರಿ ಪಾಟರ್ʼ ಖ್ಯಾತಿಯ ಬ್ಲೂಮ್ಸ್ ಬರಿ ಇಂಡಿಯಾ ಪ್ರಕಾಶನ ಸಂಸ್ಥೆಯ ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಗುರುವಾರ ರಾಹುಲ್ ಶ್ರೀವಾಸ್ತವರನ್ನು ನೇಮಕ ಮಾಡಲಾಗಿದೆ.
ಪ್ರಸಕ್ತ ಸೈಮನ್ ಆ್ಯಂಡ್ ಶೂಸ್ಟರ್ ಪಬ್ಲಿಷರ್ಸ್ ಇಂಡಿಯಾ ಪ್ರಕಾಶನ ಸಂಸ್ಥೆಯ ದಕ್ಷಿಣ ಏಶ್ಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ಶ್ರೀ ವಾಸ್ತವ, 2025ರ ಆರಂಭದಲ್ಲಿ ಬ್ಲೂಮ್ಸ್ ಬರಿ ಇಂಡಿಯಾದ ಅಧಿಕಾರ ಸ್ವೀಕರಿಸಲಿದ್ದಾರೆ. 12 ವರ್ಷಗಳ ನಂತರ ಬ್ಲೂಮ್ಸ್ ಬರಿ ಪ್ರಕಾಶನ ಸಂಸ್ಥೆಯಿಂದ ನಿವೃತ್ತರಾಗುತ್ತಿರುವ ರಾಜೀವ್ ಬೆರಿ ಉತ್ತರಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಶ್ರೀವಾಸ್ತವ, “ಪ್ರಕಾಶನದಲ್ಲಿ ಬ್ಲೂಮ್ ಬರಿಯ ಜಾಗತಿಕ ಪರಂಪರೆಯು ಓದುಗರು ಹಾಗೂ ವಿದ್ವಾಂಸರ ನಡುವೆ ಒಂದೇ ರೀತಿ ಪ್ರತಿಧ್ವನಿಸುತ್ತದೆ. ಭಾರತದಲ್ಲಿನ ಈ ಪ್ರತಿಷ್ಠಿತ ಬ್ರ್ಯಾಂಡ್ ನ ಪಯಣಕ್ಕೆ ನನ್ನ ಕೊಡುಗೆ ನೀಡಲು ರೋಮಾಂಚನಗೊಂಡಿದ್ದೇನೆ. ನಾವಿಬ್ಬರೂ ಒಟ್ಟಿಗೆ ವಿಭಿನ್ನ ಧ್ವನಿಗಳಿಗೆ ಅವಕಾಶ ನೀಡುವುದನ್ನು, ಯುವ ಮನಸ್ಸುಗಳನ್ನು ಪ್ರೇರೇಪಿಸುವುದನ್ನು ಹಾಗೂ ಈ ಪ್ರಾಂತ್ಯದಲ್ಲಿ ಪ್ರತಿ ಓದುಗನಿಗೂ ಗುಣಮಟ್ಟದ ಸಾಹಿತ್ಯ ಪ್ರವೇಶ ವಿಸ್ತರಿಸುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದ್ದಾರೆ.
ಏಶ್ಯದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸ್ವಾಧೀನ ಮತ್ತು ಕಾರ್ಪೊರೇಟ್ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ವಫಾ ಪೇಮನ್ ಅವರಿಗೆ ರಾಹುಲ್ ಶ್ರೀ ವಾಸ್ತವ ವರದಿ ಮಾಡಿಕೊಳ್ಳಲಿದ್ದಾರೆ ಎಂದು ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ.
ರಾಹುಲ್ ಶ್ರೀ ವಾಸ್ತವ ಅವರಿಗೆ ಸೈಮನ್ ಆ್ಯಂಡ್ ಶೂಸ್ಟರ್ ಪಬ್ಲಿಷರ್ಸ್, ರ‍್ಯಾಂಡಮ್ ಹೌಸ್, ಪೆಂಗ್ವಿನ್ ಬುಕ್ಸ್ ಹಾಗೂ ಇಂಡಿಯಾ ಬುಕ್ ಹೌಸ್ ನೊಂದಿಗೆ ಕೆಲಸ ನಿರ್ವಹಿಸಿದ 30 ವರ್ಷಗಳ ವ್ಯಾಪಕ ಅನುಭವವಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
“ಪ್ರಕಾಶನ ಉದ್ಯಮದ ಬಗೆಗಿನ ರಾಹುಲ್ ಶ್ರೀ ವಾಸ್ತವರ ಅಕ್ಕರೆ ಹೊಳಪಿನಿಂದ ಕೂಡಿದ್ದು, ಅವರು ಬ್ಲೂಮ್ಸ್ ಬರಿ ಇಂಡಿಯಾವನ್ನು ಯಶಸ್ವಿಯಾಗಿ ಬೆಳೆಸುವುದನ್ನು ಮುಂದುವರಿಸಲಿದ್ದಾರೆ ಎಂಬ ಬಗ್ಗೆ ನಾವು ವಿಶ್ವಾಸ ಹೊಂದಿದ್ದೇವೆ. ಆ ಮೂಲಕ ಅವರು ಈ ಉದ್ಯಮಕ್ಕೆ ಚಿಂತನೆಯ ಸಂಪತ್ತು ಹಾಗೂ ನಾಯಕತ್ವದ ಕೌಶಲವನ್ನು ತರಲಿದ್ದಾರೆ ಹಾಗೂ ಈ ಉದ್ಯಮದೆಡೆಗಿನ ನಮ್ಮ ಬಯಕೆಗಳನ್ನು ಅವರು ಪೂರೈಸಲಿದ್ದಾರೆ ಎಂದು ಭಾವಿಸಿದ್ದೇವೆ” ಎಂದು ಪೇಮನ್ ಹೇಳಿದ್ದಾರೆ.
ಸೈಮನ್ ಆ್ಯಂಡ್ ಶೂಸ್ಟರ್ ನೊಂದಿಗಿನ ರಾಹುಲ್ ಶ್ರೀವಾಸ್ತವರ ವೃತ್ತಿ ಜೀವನ ದಾಖಲೆ ಅದ್ವಿತೀಯವಾಗಿದೆ ಎಂದು ಬ್ಲೂಮ್ಸ್ ಬರಿ ಪಬ್ಲಿಷಿಂಗ್ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೈಗೆಲ್ ನ್ಯೂಟನ್ ಪ್ರಶಂಸಿಸಿದ್ದಾರೆ.
1986ರಲ್ಲಿ ಸ್ಥಾಪನೆಗೊಂಡ ಬ್ಲೂಮ್ಸ್ ಬರಿ ಸ್ವತಂತ್ರ ಪ್ರಕಾಶನ ಸಂಸ್ಥೆಯಾಗಿದ್ದು, ಹ್ಯಾರಿ ಪಾಟರ್ ಸರಣಿಯ ಮೂಲ ಪ್ರಕಾಶನ ಸಂಸ್ಥೆ ಹಾಗೂ ಹಕ್ಕು ಸ್ವಾಮ್ಯ ಸಂಸ್ಥೆಯಾಗಿದೆ. ಲಂಡನ್, ನ್ಯೂಯಾರ್ಕ್, ಹೊಸ ದಿಲ್ಲಿ, ಆಕ್ಸ್ ಫರ್ಡ್ ಹಾಗೂ ಸಿಡ್ನಿಯಲ್ಲಿ ಬ್ಲೂಮ್ ಬೆರಿ ತನ್ನ ಕಚೇರಿಗಳನ್ನು ಹೊಂದಿದೆ.