ತಮಿಳುನಾಡು: ಫಾ.ಸ್ಟ್ಯಾನ್ ಸ್ವಾಮಿ ಸ್ಮಾರಕಕ್ಕೆ ಸರಕಾರದ ಅಡ್ಡಿಯನ್ನು ನಿವಾರಿಸಿದ ಮದ್ರಾಸ್ ಹೈಕೋರ್ಟ್
ಚೆನ್ನೈ: ಒಂಭತ್ತು ತಿಂಗಳು ಜೈಲಿನಲ್ಲಿ ಕೊಳೆಯುತ್ತ ಜಾಮೀನಿಗಾಗಿ ಕಾಯುತ್ತಲೇ ಕೊನೆಯುಸಿರೆಳೆದ ಬುಡಕಟ್ಟು ಹಕ್ಕುಗಳ ಹೋರಾಟಗಾರ ಫಾ.ಸ್ಟ್ಯಾನ್ ಸ್ವಾಮಿ(84) ಅವರ ಜೀವನ ಮತ್ತು ಕಾರ್ಯಗಳನ್ನು ಗೌರವಿಸುವ ತಮಿಳುನಾಡಿನ ಕೃಷಿಕರೋರ್ವರಿಗೆ ಧರ್ಮಪುರಿ ಜಿಲ್ಲೆಯಲ್ಲಿ ಅವರ ನೆನಪಿಗಾಗಿ ಸ್ತಂಭವೊಂದನ್ನು ಸ್ಥಾಪಿಸಲು ಮದ್ರಾಸ್ ಉಚ್ಚ ನ್ಯಾಯಾಲಯವು ಅನುಮತಿ ನೀಡಿದೆ. ಸ್ಟ್ಯಾನ್ ನಕ್ಸಲರೊಂದಿಗೆ ಸಂಬಂಧವನ್ನು ಹೊಂದಿದ್ದರು ಎಂಬ ಜಿಲ್ಲಾಡಳಿತದ ವಾದಕ್ಕೆ ಉಚ್ಚ ನ್ಯಾಯಾಲಯವು ಸೊಪ್ಪು ಹಾಕಲಿಲ್ಲ.
ಅರ್ಜಿದಾರ ಪಿಯೂಷ ಸೇಥಿಯಾ ಅವರು ತನ್ನ ಖಾಸಗಿ ಜಮೀನಿನಲ್ಲಿ ಶಿಲಾ ಸ್ಮಾರಕ ನಿರ್ಮಿಸಲು ಉದ್ದೇಶಿಸಿದ್ದಾರೆ ಮತ್ತು ಇದು ಸಾರ್ವಜನಿಕರಿಗೆ ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ ಎಂದು ನ್ಯಾಯಾಲಯವು ಹೇಳಿದೆ.
ನಲ್ಲಂಪಲ್ಲಿ ತಾಲೂಕಿನ ನೆಕ್ಕುಂಡಿ ಗ್ರಾಮದಲ್ಲಿ ಫಾ.ಸ್ಟ್ಯಾನ್ ಸ್ವಾಮಿಯವರ ಚಿತ್ರವನ್ನೊಳಗೊಂಡ ಶಿಲಾ ಸ್ಮಾರಕವನ್ನು ನಿರ್ಮಿಸಲು ಕೃಷಿ ಮತ್ತು ಸಹಕಾರಿ ಜಲಾನಯನ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸೇಥಿಯಾರಿಗೆ ಅನುಮತಿಯನ್ನು ನಿರಾಕರಿಸಿ ಸ್ಥಳೀಯ ತಹಶೀಲ್ದಾರರು ಜುಲೈ 2021ರಲ್ಲಿ ಹೊರಡಿಸಿದ್ದ ನೋಟಿಸನ್ನು ನ್ಯಾ.ಎಂ.ದಂಡಪಾಣಿಯವರು ರದ್ದುಗೊಳಿಸಿದರು.
ಸೇಥಿಯಾಗೆ ನೋಟಿಸ್ ನೀಡಿದ್ದು ಸರಿಯಲ್ಲ ಎಂದು ಹೇಳಿದ ನ್ಯಾಯಾಲಯವು, ಫಾ.ಸ್ಟ್ಯಾನಿ ವಿರುದ್ಧದ ಆರೋಪಗಳು ಎಂದಿಗೂ ಸಾಬೀತಾಗಿಲ್ಲ,ಹೀಗಾಗಿ ಅವುಗಳು ಅರ್ಥಹೀನ ಎಂದು ಒತ್ತಿ ಹೇಳಿತು.
ಜಾರ್ಖಂಡ್‌ನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದ ಫಾ.ಸ್ಟ್ಯಾನ್ ಅವರನ್ನು 2020,ಅ.8ರಂದು ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ನಿಷೇಧಿತ ಸಿಪಿಐ(ಮಾವೋವಾದಿ) ಜೊತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಬಂಧಿಸಲಾಗಿತ್ತು. ಅವರ ಬಂಧನಕ್ಕೆ ದೇಶವಿದೇಶಗಳಲ್ಲಿ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದು,ಸರಕಾರಿ ಪ್ರಾಯೋಜಿತ ಕಿರುಕುಳದ ಆರೋಪಗಳೂ ಕೇಳಿ ಬಂದಿದ್ದವು. ವಯಸ್ಸಾಗಿದ್ದ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಫಾ.ಸ್ಟ್ಯಾನ್ ಸ್ವಾಮಿಯವರ ಬಗ್ಗೆ ಸಂವೇದನಾಹೀನತೆ ಮತ್ತು ಮೂಲಭೂತ ಮಾನವ ಹಕ್ಕುಗಳ ನಿರಾಕರಣೆ ಎಷ್ಟೊಂದು ವ್ಯಾಪಕವಾಗಿತ್ತೆಂದರೆ ಪಾರ್ಕಿನ್ಸನ್ಸ್ ಕಾಯಿಲೆ ಪೀಡಿತರಾಗಿದ್ದ ಅವರು ನೀರು ಕೆಳಗೆ ಚೆಲ್ಲದಂತೆ ಕುಡಿಯಲು ಸಿಪ್ಪರ್‌ಗಾಗಿ ನ್ಯಾಯಾಲಯದ ಮೊರೆ ಹೋಗುವಂತಾಗಿತ್ತು.
ಫಾ.ಸ್ಟ್ಯಾನ್ ಸ್ವಾಮಿ ಅವರು ಕೆಳ ನ್ಯಾಯಾಲಯಗಳಲ್ಲಿ ಕನಿಷ್ಠ ಮೂರು ಸಲ ಮತ್ತು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಒಮ್ಮೆ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದರು.
ಕೋವಿಡೋತ್ತರ ಆರೋಗ್ಯ ಸಮಸ್ಯೆಗಳಿಂದಾಗಿ ಫಾ.ಸ್ಟ್ಯಾನ್ ಸ್ವಾಮಿ 2021,ಜು.5ರಂದು ಜೈಲಿನಲ್ಲಿ ಮೃತಪಟ್ಟಿದ್ದರು.