ರಾಜಸ್ಥಾನ ಚುನಾವಣೆ: ಪಕ್ಷೇತರರು, ಸಣ್ಣಪಕ್ಷಗಳ ಓಲೈಕೆಗೆ ಮುಂದಾದ ಬಿಜೆಪಿ

Update: 2023-12-02 09:15 GMT

Photo: PTI

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಳ್ಳುವ ಸುಳಿವನ್ನು ಚುನಾವಣೋತ್ತರ ಸಮೀಕ್ಷೆಗಳು ನೀಡಿದ ಬೆನ್ನಲ್ಲೇ, ಬಿಜೆಪಿ ಮುಖಂಡರು ಸಣ್ಣ ಪಕ್ಷಗಳು ಹಾಗೂ 20 ಮಂದಿ ಪಕ್ಷೇತರ ಅಭ್ಯರ್ಥಿಗಳ ಒಲೈಕೆ ಅರಂಭಿಸಿದ್ದಾರೆ. ಪಕ್ಷ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದವರ ಮನವೊಲಿಸುವ ಪ್ರಯತ್ನಗಳೂ ನಡೆದಿವೆ. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾದ ಸಂದರ್ಭದಲ್ಲಿ ಸಣ್ಣ ಪಕ್ಷಗಳ ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಗಳಿಸುವ ಯೋಜನೆ ಕೇಸರಿ ಪಕ್ಷದ್ದಾಗಿದೆ ಎಂದು timesofindia ವರದಿ ಮಾಡಿದೆ.

ಬಂಡಾಯ ಅಭ್ಯರ್ಥಿಗಳಾದ ರೋಹಿತೇಶ್ ಶರ್ಮಾ, ಚಂದ್ರಬಾನ್ ಸಿಂಗ್ ಅಖ್ಯಾ ಮತ್ತು ರವೀಂದ್ರ ಅವರನ್ನು ಈಗಾಗಲೇ ಭೇಟಿ ನೀಡಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಭಾರತೀಯ ಆದಿವಾಸಿ ಪಕ್ಷ, ರಾಷ್ಟ್ರೀಯ ಲೋಕತಂತ್ರ ಪಕ್ಷ ಮತ್ತು ಬಿಎಸ್ಪಿ ಜತೆ ಮಾತುಕತೆ ಆರಂಭಿಸುವಂತೆ ರಾಜ್ಯದ ಚುನಾವಣಾ ಉಸ್ತುವಾರಿ ಹೊಂದಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಮೂರು ಪಕ್ಷಗಳು ಸುಮಾರು 6 ರಿಂದ 10 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್, ಉಪನಾಯಕ ಸತೀಶ್ ಪೂನಿಯಾ ಹಾಗೂ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಪಕ್ಷೇತರ ಅಭ್ಯರ್ಥಿಗಳ ಓಲೈಕೆ ಪ್ರಯತ್ನ ನಡೆಸಿದ್ದಾರೆ.

"ಪಕ್ಷೇತರರಾದ ಆಖ್ಯಾ ಮತ್ತು ಭಾತಿಯಂಥದವರು ಎಂದೂ ಪಕ್ಷದ ಕೇಂದ್ರ ನಾಯಕತ್ವ ಬಗ್ಗೆ ಧ್ವನಿ ಎತ್ತಿಲ್ಲ. ಆಖ್ಯಾ ಅವರಂತೂ ಮೋದಿಯವರ ಬಗ್ಗೆ ನಿಷ್ಠೆ ಪ್ರದರ್ಶಿಸಿದ್ದು, ಪ್ರಚಾರದಲ್ಲೂ, ಜನ ಅವರನ್ನು ಬಿಜೆಪಿಯ ತಳಹಂತದ ಸೈನಿಕ ಎಂದೇ ಕಂಡಿದ್ದಾರೆ" ಎಂದು ಮುಖಂಡರೊಬ್ಬರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News