ರಾಜಸ್ಥಾನ: ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಬಾಲಕಿಯ ಸಾಮೂಹಿಕ ಅತ್ಯಾಚಾರ
ಜೈಪುರ: ರಾಜಸ್ಥಾನದ ಜೋಧ್‌ಪುರದ ಮಹಾತ್ಮಾ ಗಾಂಧಿ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಇಬ್ಬರು ಯುವಕರು 15 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತಾಯಿ ಬೈದ ಹಿನ್ನೆಲೆಯಲ್ಲಿ ಈ ಬಾಲಕಿ ರವಿವಾರ ಸಂಜೆ ಮನೆ ತ್ಯಜಿಸಿದ್ದಳು. ಆಕೆಯ ಕುಟುಂಬದವರು ಆಕೆಗಾಗಿ ಹುಡುಕಾಡಿದರು. ಆದರೆ, ಆಕೆ ರವಿವಾರ ರಾತ್ರಿ ವರೆಗೆ ಪತ್ತೆಯಾಗಲಿಲ್ಲ. ಅನಂತರ ಅವರು ಸೂರಸಾಗರ್ ಪೊಲೀಸ್ ಠಾಣೆಯಲ್ಲಿ ಸೋಮವಾರ ನಾಪತ್ತೆ ಪ್ರಕರಣ ದಾಖಲಿಸಿದರು ಎಂದು ಡಿಸಿಪಿ (ಪಶ್ಚಿಮ)ರಾಜರ್ಷಿ ರಾಜ ವರ್ಮಾ ತಿಳಿಸಿದ್ದಾರೆ.
ರವಿವಾರ ರಾತ್ರಿ ಆಸ್ಪತ್ರೆಯ ಆವರಣದಲ್ಲಿ ಏಕಾಂಗಿಯಾಗಿ ತಿರುಗಾಡುತ್ತಿದ್ದ ಬಾಲಕಿಯನ್ನು ಗಮನಿಸಿದ ಇಬ್ಬರು ಯುವಕರು ಆಕೆಯನ್ನು ಸಂಪರ್ಕಿಸಿದ್ದಾರೆ. ಆಕೆಯೊಂದಿಗೆ ಮಾತುಕತೆ ನಡೆಸಿದ್ದಾರೆ. ಅನಂತರ ಆಸ್ಪತ್ರೆಯ ವೈದ್ಯಕೀಯ ಜೈವಿಕ ತ್ಯಾಜ್ಯಗಳನ್ನು ವಿಲೇವೇರಿ ಮಾಡುವ ಪ್ರಾಂಗಣದ ಹಿಂದಿರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯ ಆವರಣದಲ್ಲಿ ಬಾಲಕಿ ತಿರುಗಾಡುತ್ತಿರುವ ಕುರಿತು ಪೊಲೀಸರು ಸೋಮವಾರ ಸಂಜೆ ಮಾಹಿತಿ ಸ್ವೀಕರಿಸಿದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತಂಡವೊಂದನ್ನು ಕಳುಹಿಸಿ ಕೊಡಲಾಗಿತ್ತು. ಪೊಲೀಸರು ಬಾಲಕಿಯನ್ನು ವಶಕ್ಕೆ ತೆಗೆದುಕೊಂಡು ಆಕೆಯ ಹೆತ್ತವರಿಗೆ ಒಪ್ಪಿಸಿದ್ದಾರೆ. ಅನಂತರ ಬಾಲಕಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಕುಟುಂಬ ಹಾಗೂ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ವರ್ಮಾ ಹೇಳಿದ್ದಾರೆ.
ಬಾಲಕಿ ಹೇಳಿಕೆ ದಾಖಲಿಸಿಕೊಂಡ ಬಳಿಕ ತನಿಖೆ ಆರಂಭಿಸಲಾಗಿದೆ ಹಾಗೂ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ವಿಧಿ ವಿಜ್ಞಾನ ತಂಡ ಆಸ್ಪತ್ರೆಯ ಆವರಣಕ್ಕೆ ಭೇಟಿ ನೀಡಿದೆ ಹಾಗೂ ಘಟನೆ ನಡೆದ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿದೆ ಎಂದು ಅವರು ತಿಳಿಸಿದ್ದಾರೆ.
ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ ಬಳಿಕ ಇಬ್ಬರು ಶಂಕಿತರನ್ನು ವಿಚಾರಣೆಗೆ ಮಂಗಳವಾರ ಅಪರಾಹ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ ಹಾಗೂ ಪೊಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರ್ಮಾ ತಿಳಿಸಿದ್ದಾರೆ.