ರಾಜಸ್ಥಾನ: ಐಐಟಿ ಆಕಾಂಕ್ಷಿ 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ
ಕೋಟಾ/ಹೊಸದಿಲ್ಲಿ: ರಾಜಸ್ಥಾನದ ಕೋಟಾದಲ್ಲಿ ಐಐಟಿ ಆಕಾಂಕ್ಷಿ 17 ವರ್ಷದ ವಿದ್ಯಾರ್ಥಿಯೊಬ್ಬ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ರಾಂಪುರದ ವಿದ್ಯಾರ್ಥಿಯು ಎರಡು ತಿಂಗಳ ಹಿಂದೆಯಷ್ಟೇ ಕೋಟಾಕ್ಕೆ ಆಗಮಿಸಿದ್ದನು, ಕಠಿಣವಾದ ಐಐಟಿ ಜೆಇಇಯಲ್ಲಿ ಪಾಸಾಗಲು ಕೋಚಿಂಗ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಯು ಕೋಟಾದ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ಸ್ನೇಹಿತನೊಂದಿಗೆ ತಂಗಿದ್ದ. ತನ್ನ ಸ್ನೇಹಿತ ಇಲ್ಲದ ಸಂದರ್ಭದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಯ ರೂಮ್ ಮೇಟ್ ಇಂದು ಬೆಳಿಗ್ಗೆ ತಮ್ಮ ಕೋಣೆಗೆ ಹಿಂತಿರುಗಿ ನೋಡಿದಾಗ ಬಾಗಿಲು ಬೀಗ ಹಾಕಿರುವುದು ಕಂಡುಬಂದಿದೆ. ಬಳಿಕ ಅಕ್ಕಪಕ್ಕದ ಮನೆಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಕೋಣೆಗೆ ಪ್ರವೇಶಿಸಿದ್ದಾರೆ.
‘‘ವಿದ್ಯಾರ್ಥಿ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೋಟಾ ಜಿಲ್ಲೆಯಲ್ಲಿ ಅತ್ಯಂತ ಬೇಡಿಕೆಯ ಮತ್ತು ಸ್ಪರ್ಧಾತ್ಮಕ ರಾಷ್ಟ್ರೀಯ ಪರೀಕ್ಷೆಗಳನ್ನು ಪಾಸಾಗಲು ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಆತ್ಮಹತ್ಯೆಯ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಕಂಡಿದ್ದಾರೆ.
ಕಳೆದ ವರ್ಷ ಕೋಟಾದಲ್ಲಿ ಕನಿಷ್ಠ 15 ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದವು. ಈ ವರ್ಷವೂ ಆ ಸಂಖ್ಯೆ 15ಕ್ಕೆ ತಲುಪಿದೆ.