15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಫೆ. 27ರಂದು ಚುನಾವಣೆ

Update: 2024-01-29 09:33 GMT

ಹೊಸದಿಲ್ಲಿ: ಫೆಬ್ರವರಿ 27ರಂದು 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ ಇಂದು ಘೋಷಿಸಿದೆ.

ಒಟ್ಟು 13 ರಾಜ್ಯಗಳ 50 ರಾಜ್ಯಸಭಾ ಸದಸ್ಯರ ಅವಧಿ ಎಪ್ರಿಲ್‌ 2ರಂದು ಮುಗಿಯಲಿದ್ದರೆ ಎರಡು ರಾಜ್ಯಗಳ ಉಳಿದ ಆರು ಸದಸ್ಯರು ಎಪ್ರಿಲ್‌ 3ರಂದು ನಿವೃತ್ತರಾಗಲಿದ್ದಾರೆ.

ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದರೆ, ಮಹಾರಾಷ್ಟ್ರ, ಬಿಹಾರ ರಾಜ್ಯಗಳ ತಲಾ ಆರು ಸ್ಥಾನಗಳಿಗೆ, ಪಶ್ಚಿಮ ಬಂಗಾಳ, ಮಧ್ಯಪ್ರದೇಶದ ತಲಾ ಐದು ಸ್ಥಾನಗಳಿಗೆ, ಗುಜರಾತ್‌, ಕರ್ನಾಟಕದ ತಲಾ ನಾಲ್ಕು, ಆಂಧ್ರ ಪ್ರದೇಶ, ತೆಲಂಗಾಣ, ರಾಜಸ್ಥಾನ, ಒಡಿಶಾ ರಾಜ್ಯಗಳ ತಲಾ ಮೂರು, ಉತ್ತರಾಖಂಡ, ಛತ್ತೀಸಗಢ, ಹರ್ಯಾಣ ಮತ್ತು ಹಿಮಾಚಲ ಪ್ರದೇಶದ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಫೆಬ್ರವರಿ 8ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು, ಫೆಬ್ರವರಿ 15 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ, ಫೆಬ್ರವರಿ 16ರಂದು ನಾಮಪತ್ರಗಳ ಪರಿಶೀಲನೆ, ಫೆಬ್ರವರಿ 20, ನಾಮಪತ್ರ ವಾಪಸಾತಿಗೆ ಅಂತಿಮ ದಿನಾಂಕವಾಗಲಿದೆ.

ಫೆಬ್ರವರಿ 27ರಂದು ಬೆಳಿಗ್ಗೆ 9 ರಿಂದ ಸಂಜೆ 4 ತನಕ ಚುನಾವಣೆ ನಡೆಯಲಿದೆ. ಮತ ಎಣಿಕೆ ಫೆಬ್ರವರಿ 27ರಂದು ಸಂಜೆ 5ಕ್ಕೆ ನಡೆಯಲಿದೆ.

ರಾಜ್ಯಸಭಾ ಸದಸ್ಯರ ಅವಧಿ ಆರು ವರ್ಷಗಳಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News