ಸಂಸತ್ತು ಅಂಗೀಕರಿಸಿರುವ ಕಾಯ್ದೆಗಳಿಗೆ ನಿಯಮಗಳನ್ನು ರೂಪಿಸುವಲ್ಲಿ ವಿಳಂಬ: ಕೇಂದ್ರಕ್ಕೆ ರಾಜ್ಯಸಭಾ ಸಮಿತಿ ತರಾಟೆ
ಹೊಸದಿಲ್ಲಿ: ಬಿಜೆಪಿ ಸಂಸದ ಲಕ್ಷ್ಮೀಕಾಂತ ಬಾಜಪೇಯಿ ನೇತೃತ್ವದ ರಾಜ್ಯಸಭೆಯ ಅಧೀನ ಶಾಸನ ಸಮಿತಿಯು ಸಂಸತ್ತು ಅಂಗೀಕರಿಸಿರುವ ಕಾಯ್ದೆಗಳಿಗೆ ನಿಯಮಾವಳಿಗಳನ್ನು ರೂಪಿಸುವಲ್ಲಿ ವಿಳಂಬಕ್ಕಾಗಿ ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡಿದೆ. ಕೇಂದ್ರ ಸಚಿವಾಲಯಗಳು ನಿಯಮಗಳನ್ನು ರೂಪಿಸುವಲ್ಲಿ ವಿಳಂಬಿಸುತ್ತಿರುವುದು ಪುನರಾವರ್ತನೆಗೊಳ್ಳುತ್ತಿರುವ ವಿದ್ಯಮಾನವಾಗಿದೆ ಎಂದು ಸಮಿತಿಯು ಇತ್ತೀಚಿಗೆ ರಾಜ್ಯಸಭೆಯಲ್ಲಿ ಸಲ್ಲಿಸಿದ ತನ್ನ ವರದಿಯಲ್ಲಿ ಹೇಳಿದೆ.
ಕಾಯ್ದೆಯು ಅಂಗೀಕಾರಗೊಂಡ ಆರು ತಿಂಗಳುಗಳಲ್ಲಿ ನಿಯಮಗಳನ್ನು ರೂಪಿಸಬೇಕು ಮತ್ತು ಸರಕಾರವು ಈ ನಿಯಮಗಳನ್ನು ಸಂಸತ್ತಿನಲ್ಲಿ ಮಂಡಿಸಬೇಕು. ಸಚಿವಾಲಯಗಳು ನಿಯಮಾವಳಿಗಳನ್ನು ರೂಪಿಸುವಲ್ಲಿ ಉದಾಸೀನ ಪ್ರವೃತ್ತಿಯನ್ನು ಹೊಂದಿವೆ ಮತ್ತು ಕಾಲಮಿತಿಯೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗಂಭೀರ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ಸಮಿತಿಯು ಕಳವಳ ವ್ಯಕ್ತಪಡಿಸಿದೆ.
ಅಧೀನ ಶಾಸನಗಳ ರಚನೆಯನ್ನು ಪೂರ್ಣಗೊಳಿಸಲು ಸೂಚಿಸಲಾದ ಕಾಲಮಿತಿ, ಸಮಿತಿಯ ಹಲವಾರು ಅವಲೋಕನಗಳು ಮತ್ತು ಶಿಫಾರಸುಗಳ ಹೊರತಾಗಿಯೂ ವಿವಿಧ ಸಚಿವಾಲಯಗಳಲ್ಲಿ ಹಲವಾರು ಕಾಯ್ದೆಗಳು ಬಹಳಷ್ಟು ವರ್ಷಗಳಿಂದಲೂ ಬಾಕಿಯುಳಿದಿವೆ ಎಂದು ಬಾಜಪೇಯಿ ವರದಿಯಲ್ಲಿ ಹೇಳಿದ್ದಾರೆ.
ಸಮಿತಿಯು ವರದಿಯಲ್ಲಿ ಉಲ್ಲೇಖಿಸಿರುವ ಬಾಕಿಯುಳಿದಿರುವ ಕಾಯ್ದೆಗಳಲ್ಲಿ 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ,ಮಧ್ಯಸ್ಥಿಕೆ ಮತ್ತು ರಾಜಿ (ತಿದ್ದುಪಡಿ) ಕಾಯ್ದೆ,ತೈಲ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಕಾಯ್ದೆ 2006; ಸಿಕ್ಕಿಂ ವಿವಿ ಕಾಯ್ದೆ 2006, ತ್ರಿಪುರಾ ವಿವಿ ಕಾಯ್ದೆ 2006, ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿವಿ ಕಾಯ್ದೆ 2007 ಮತ್ತು ಕೇಂದ್ರೀಯ ವಿವಿ ಕಾಯ್ದೆ 2009ರ ಅಧೀನ ಶಾಸನಗಳು, ವಕ್ಫ್ ಕಾಯ್ದೆ 2013 ಇತ್ಯಾದಿಗಳು ಸೇರಿವೆ.
ನಿಯಮಗಳು/ನಿಬಂಧನೆಗಳನ್ನು ರೂಪಿಸಲು ಸಚಿವಾಲಯಗಳು ಸಾಕಷ್ಟು ಸಮಯವನ್ನು ತೆಗೆದುಕೊಂಡಿವೆ, ಪರಿಣಾಮವಾಗಿ ಕಾಯ್ದೆಗಳು ಜಾರಿಗೊಂಡಿಲ್ಲ ಅಥವಾ ಭಾಗಶಃ ಜಾರಿಗೊಂಡಿವೆ ಎಂದು ಬೆಟ್ಟು ಮಾಡಿರುವ ಸಮಿತಿಯು, ಆರು ತಿಂಗಳುಗಳಲ್ಲಿ ನಿಯಮಗಳನ್ನು ರೂಪಿಸದಿದ್ದರೆ ಕಾರ್ಯದರ್ಶಿಯು ಸಂಬಂಧಿಸಿದ ಸಚಿವರಿಗೆ ತಿಳಿಸಬೇಕು ಮತ್ತು ಅವರ ಆದೇಶಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದ್ದ ತನ್ನ 1971ರ ವರದಿಯನ್ನು ಉಲ್ಲೇಖಿಸಿದೆ.