ಏಕಕಾಲಿಕ ಚುನಾವಣೆಗಳು: ಸಾರ್ವಜನಿಕರಿಂದ 5,000ಕ್ಕೂ ಅಧಿಕ ಸಲಹೆಗಳನ್ನು ಸ್ವೀಕರಿಸಿದ ರಾಮನಾಥ ಕೋವಿಂದ್ ಸಮಿತಿ

Update: 2024-01-10 14:54 GMT

ರಾಮನಾಥ್ ಕೋವಿಂದ್ (Photo: PTI)

ಹೊಸದಿಲ್ಲಿ: ‘ಒಂದು ದೇಶ ಒಂದು ಚುನಾವಣೆ ’ ಕುರಿತ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ದೇಶದಲ್ಲಿ ಏಕಕಾಲಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 5,000ಕ್ಕೂ ಅಧಿಕ ಸಲಹೆಗಳನ್ನು ಸ್ವೀಕರಿಸಿದೆ.

ಸಮಿತಿಯು ದೇಶದಲ್ಲಿ ಏಕಕಾಲಿಕ ಚುನಾವಣೆಗಳನ್ನು ಸಾಧ್ಯವಾಗಿಸಲು ಪ್ರಸ್ತುತ ಕಾನೂನು ಆಡಳಿತಾತ್ಮಕ ಚೌಕಟ್ಟಿನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲು ಕಳೆದ ವಾರ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿತ್ತು. ಈವರೆಗೆ 5,000ಕ್ಕೂ ಅಧಿಕ ಇ-ಮೇಲ್ ಗಳನ್ನು ಸ್ವೀಕರಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿದವು.

ಜ.15ರೊಳಗೆ ಸ್ವೀಕೃತ ಎಲ್ಲ ಸಲಹೆಗಳನ್ನು ಪರಿಗಣನೆಗಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಮಿತಿಯು ಬಹಿರಂಗ ನೋಟಿಸ್ ನಲ್ಲಿ ತಿಳಿಸಿತ್ತು.

2023, ಸೆ.2ರಂದು ರಚನೆಗೊಂಡ ಬಳಿಕ ಸಮಿತಿಯು ಎರಡು ಸಭೆಗಳನ್ನು ನಡೆಸಿದ್ದು, ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ರಾಜಕೀಯ ಪಕ್ಷಗಳಿಂದ ಸಲಹೆಗಳನ್ನು ಆಹ್ವಾನಿಸಿತ್ತು. ಏಕಕಾಲಿಕ ಚುನಾವಣೆಗಳನ್ನು ನಡೆಸುವ ಬಗ್ಗೆ ಪರಸ್ಪರ ಒಪ್ಪಿತ ದಿನಾಂಕದಂದು ಸಂವಾದಕ್ಕೂ ರಾಜಕೀಯ ಪಕ್ಷಗಳನ್ನು ಆಹ್ವಾನಿಸಿದ್ದ ಸಮಿತಿಯು, ಬಳಿಕ ಅವುಗಳಿಗೆ ನೆನಪಿನೋಲೆಗಳನ್ನುಕಳುಹಿಸಿತ್ತು.

ಆರು ರಾಷ್ಟ್ರೀಯ ಪಕ್ಷಗಳು,33 ರಾಜ್ಯ ಪಕ್ಷಗಳು ಮತ್ತು ಏಳು ನೋಂದಾಯಿತ ಮಾನ್ಯತೆ ಹೊಂದಿರದ ಪಕ್ಷಗಳಿಗೆ ಪತ್ರಗಳನ್ನು ಕಳುಹಿಸಲಾಗಿತ್ತು. ಏಕಕಾಲಿಕ ಚುನಾವಣೆಗಳ ಬಗ್ಗೆ ಕಾನೂನು ಆಯೋಗದ ಅಭಿಪ್ರಾಯಗಳನ್ನೂ ಸಮಿತಿಯು ಆಲಿಸಿದ್ದು, ಅದು ಇನ್ನೊಮ್ಮೆ ಆಯೋಗವನ್ನು ಕರೆಸುವ ಸಾಧ್ಯತೆಯಿದೆ.

ವಿಚಾರಣಾ ನಿಬಂಧನೆಗಳಂತೆ ಸಮಿತಿಯು ಭಾರತದ ಸಂವಿಧಾನದಡಿ ಹಾಲಿ ಮಾರ್ಗಸೂಚಿಗಳನ್ನು ಮತ್ತು ಇತರ ಶಾಸನಬದ್ಧ ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಲೋಕಸಭೆ, ರಾಜ್ಯ ವಿಧಾನಸಭೆಗಳು, ನಗರಸಭೆಗಳು ಮತ್ತು ಪಂಚಾಯತ್ ಗಳಿಗೆ ಏಕಕಾಲಿಕ ಚುನಾವಣೆಗಳನ್ನು ನಡೆಸುವ ಕುರಿತು ಪರಿಶೀಲಿಸಿ ತನ್ನ ಶಿಫಾರಸುಗಳನ್ನು ಸಲ್ಲಿಸಬೇಕಿದೆ. ಏಕಕಾಲಿಕ ಚುನಾವಣೆಗಳನ್ನು ನಡೆಸಲು ಸಂವಿಧಾನ,ಜನತಾ ಪ್ರಾತಿನಿಧ್ಯ ಕಾಯ್ದೆ 1950ರ ಪರಿಶೀಲನೆ ಮತ್ತು ತಿದ್ದುಪಡಿಗಳು ಅಗತ್ಯವಿರುವ ಇತರ ಯಾವುದೇ ನಿಯಮಗಳನ್ನು ಸಮಿತಿಯು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಸೂಚಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News