ಸರ್ಕಾರಿ ಗೌರವಗಳೊಂದಿಗೆ ರತನ್ ಟಾಟಾ ಅಂತ್ಯಸಂಸ್ಕಾರ: ಮಹಾರಾಷ್ಟ್ರ ಸಿಎಂ ಶಿಂಧೆ

Update: 2024-10-10 02:59 GMT

ಮುಂಬೈ: ಬುಧವಾರ ಕೊನೆಯುಸಿರೆಳೆದ ಖ್ಯಾತ ಉದ್ಯಮಿ ರತನ್ ಟಾಟಾ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಕಟಿಸಿದ್ದಾರೆ.

ಮೃತರ ಗೌರವಾರ್ಥ ಮಹಾರಾಷ್ಟ್ರದಲ್ಲಿ ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಪಡಿಲಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಬಾಲಿವುಡ್ ತಾರೆಯರು, ಕಂಪನಿಗಳ ಸಿಇಓಗಳು ಸೇರಿದಂತೆ ಹಲವು ಮಂದಿ ಗಣ್ಯರು, ರತನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

"ಕೇವಲ ಟಾಟಾ ಸಮೂಹವನ್ನು ಮಾತ್ರವಲ್ಲದೇ ದೇಶದ ಬಂಧವನ್ನೇ ಬದಲಿಸಿದ ದೂರದೃಷ್ಟಿಯ, ನಿಜ ಅರ್ಥದ ಅಸಾಮಾನ್ಯ ನಾಯಕನಿಗೆ ಗೌರವಪೂರ್ವಕ ವಿದಾಯ ಹೇಳುತ್ತಿದ್ದೇವೆ" ಎಂದು ಟಾಟಾ ಸನ್ಸ್ ಅಧ್ಯಕ್ಷರು ಕಂಬನಿ ಮಿಡಿದಿದ್ದಾರೆ. "ಈ ದೂರದೃಷ್ಟಿಯ ನಾಯಕನನ್ನು ನಾನು ಗುಜರಾತ್ ಸಿಎಂ ಆಗಿದ್ದಾಗ ಪದೇ ಪದೇ ಭೇಟಿ ಮಾಡುತ್ತಿದ್ದೆ. ವೈವಿಧ್ಯಮಯ ವಿಷಯಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದೆವು. ದೆಹಲಿಗೆ ಬಂದಾಗಲೂ ಇದು ಮುಂದುವರಿಯಿತು, ಅವರ ನಿಧನದಿಂದ ಅತೀವ ನೋವಾಗಿದ್ದು, ಈ ದುಃಖದ ಸನ್ನಿವೇಶದಲ್ಲಿ ಅವರ ಕುಟುಂಬ, ಸ್ನೇಹಿತರು ಹಾಗೂ ಅನುಯಾಯಿಗಳ ಜತೆಗೆ ನಾವು ಸದಾ ಇದ್ದೇವೆ. ಓಂ ಶಾಂತಿ" ಎಂದು ಪ್ರಧಾನಿ ನುಡಿನಮನ ಸಲ್ಲಿಸಿದ್ದಾರೆ.

ಟಾಟಾ ಅವರ ಸಹಾಯಕ ಶಂತನು ನಾಯ್ಡು, ಒಡಿಶಾ ಮಾಜಿ ಸಿಎಂ ನವೀನ್ ಪಟ್ನಾಯಕ್, ಪಿ.ಚಿದಂಬರಂ, ಕುಮಾರಿ ಶೆಲ್ಜಾ, ಆಂಧ್ರಾ ಸಿಎಂ ಚಂದ್ರಬಾಬು ನಾಯ್ಡು, ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಖ್ಯಾತ ಕ್ರಿಕೆಟರ್ ಹರ್ಭಜನ್ ಸಿಂಗ್, ಗೂಗಲ್ ಸಿಇಓ ಸುಂದರ್ ಪಿಚೈ, ನಟ ಕಮಲ್ಹಾಸನ್ ಸೇರಿದಂತೆ ಅನೇಕ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News