ಸಾಲ ಮರುಪಾವತಿ ಮಾಡಿದ 30 ದಿನಗಳಲ್ಲಿ ದಾಖಲೆಗಳನ್ನು ಮರಳಿಸುವಂತೆ ಬ್ಯಾಂಕುಗಳಿಗೆ ಆರ್‌ಬಿಐ ನಿರ್ದೇಶನ

Update: 2023-09-14 12:00 GMT

ಸಾಂದರ್ಭಿಕ ಚಿತ್ರ (PTI) 

ಹೊಸದಿಲ್ಲಿ: ಸಾಲಗಾರರು ಸಾಲಗಳನ್ನು ಪೂರ್ಣವಾಗಿ ಮರುಪಾವತಿಸಿದ ಅಥವಾ ಇತ್ಯರ್ಥಗೊಳಿಸಿದ ಒಂದು ತಿಂಗಳೊಳಗೆ ಚರ ಅಥವಾ ಸ್ಥಿರಾಸ್ತಿಗಳ ಮೂಲ ದಾಖಲೆಗಳನ್ನು ಮರಳಿಸುವಂತೆ ಆರ್‌ಬಿಐ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ದಾಖಲೆ ಪತ್ರಗಳನ್ನು ಈ ಅವಧಿಯಲ್ಲಿ ಮರಳಿಸಲು ವಿಫಲಗೊಂಡರೆ ವಿಳಂಬವಾದ ಪ್ರತಿ ದಿನಕ್ಕೆ 5,000 ರೂ.ಗಳಂತೆ ಸಾಲಗಾರರಿಗೆ ಪರಿಹಾರವನ್ನು ನೀಡುವಂತೆ ಆರ್‌ಬಿಐ ತಾಕೀತು ಮಾಡಿದೆ. ಈ ನಿರ್ದೇಶನ 2023, ಡಿ.1ರಿಂದ ಜಾರಿಗೊಳ್ಳಲಿದೆ.

ಆರ್‌ಬಿಐ ಹೇಳಿದ್ದೇನು?

ಸಾಲ ಮರುಪಾವತಿಸಿದ 30 ದಿನಗಳಲ್ಲಿ ದಾಖಲೆಗಳನ್ನು ಮರಳಿಸುವಂತೆ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಗೃಹಸಾಲ ಕಂಪನಿಗಳು, ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಿಗೆ ನಿರ್ದೇಶನ ನೀಡುವ ಜೊತೆಗೆ ನೋಂದಣಿಗೆ ಸಂಬಂಧಿಸಿದ ಶುಲ್ಕಗಳನ್ನು ಕೈಬಿಡುವಂತೆಯೂ ಆರ್‌ಬಿಐ ಸೂಚಿಸಿದೆ. ಸಾಲಗಾರರು ಮೂಲ ಆಸ್ತಿ ದಾಖಲೆಗಳನ್ನು ಸಾಲವನ್ನು ಪಡೆದುಕೊಂಡ ಶಾಖೆಯಿಂದ ಅಥವಾ ಅವು ಲಭ್ಯವಿರುವ ಬ್ಯಾಂಕಿನ ಯಾವುದೇ ಕಚೇರಿಯಿಂದ ಪಡೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ಆರ್‌ಬಿಐ ಹೇಳಿದೆ.

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು 2023,ಡಿ.1ರ ಬಳಿಕ ಮೂಲದಾಖಲೆಗಳ ವಾಪಸಾತಿಗೆ ಗಡುವನ್ನು ಮತ್ತು ಸ್ಥಳವನ್ನು ಸಾಲ ಮಂಜೂರಾತಿ ಪತ್ರಗಳಲ್ಲಿ ನಮೂದಿಸಬೇಕಾಗುತ್ತದೆ.

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲಗಾರ(ರು) ನಿಧನರಾಗಿದ್ದರೆ ಮೂಲ ಆಸ್ತಿ ದಾಖಲೆಗಳನ್ನು ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಮರಳಿಸಲು ಉತ್ತಮ ಕಾರ್ಯವಿಧಾನವನ್ನು ಹೊಂದಿರಬೇಕು. ಗ್ರಾಹಕರ ಮಾಹಿತಿಗಾಗಿ ಎಲ್ಲ ಪ್ರಕ್ರಿಯೆಗಳು ಮತ್ತು ಇತರ ನೀತಿಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು.

ಏಕೆ ಈ ಹೊಸ ನಿರ್ದೇಶನಗಳು?

ಆಸ್ತಿ ದಾಖಲೆಗಳನ್ನು ಮರಳಿಸುವಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ವಿಭಿನ್ನ ಪದ್ಧತಿಗಳನ್ನು ಅನುಸರಿಸುವುದನ್ನು ಗಮನಿಸಿರುವ ಆರ್‌ಬಿಐ,ಇದು ಗ್ರಾಹಕರ ದೂರುಗಳು ಮತ್ತು ವ್ಯಾಜ್ಯಗಳಿಗೆ ಕಾರಣವಾಗುತ್ತದೆ. ಹೀಗಾಗಿ ಈ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜವಾಬ್ದಾರಿಯುತ ಸಾಲ ನೀಡಿಕೆ ನಡವಳಿಕೆಯನ್ನು ಉತ್ತೇಜಿಸಲು ಈ ನಿರ್ದೇಶನಗಳನ್ನು ನೀಡಲಾಗಿದೆ ಎಂದು ತಿಳಿಸಿದೆ.

ಯಾವ ರೀತಿಯ ಸಾಲಗಳ ಮೇಲೆ ಪರಿಣಾಮವಾಗುತ್ತದೆ?

ಆರ್‌ಬಿಐ ವ್ಯಾಖ್ಯಾನದ ಪ್ರಕಾರ ವೈಯಕ್ತಿಕ ಸಾಲಗಳಿಗೆ ಈ ನಿರ್ದೇಶನಗಳು ಅನ್ವಯಗೊಳ್ಳುತ್ತವೆ. ಗ್ರಾಹಕ ಸಾಲ,ಶಿಕ್ಷಣ ಸಾಲ,ಮನೆಯಂತಹ ಸ್ಥಿರಾಸ್ತಿಗಳ ನಿರ್ಮಾಣಕ್ಕಾಗಿ ಮತ್ತು ಅವುಗಳ ಉನ್ನತೀಕರಣಕ್ಕಾಗಿ ಸಾಲಗಳು ಹಾಗೂ ಶೇರುಗಳು ಮತ್ತು ಡಿಬೆಂಚರ್‌ಗಳಂತಹ ಹಣಕಾಸು ಆಸ್ತಿಗಳಲ್ಲಿ ಹೂಡಿಕೆಗಾಗಿ ನೀಡಿದ ಸಾಲಗಳು ಇವುಗಳಲ್ಲಿ ಸೇರುತ್ತವೆ.

ದಾಖಲೆಗಳನ್ನು ಮರಳಿಸಲು ವಿಳಂಬವಾದರೆ ಏನು?

ಸಾಲವನ್ನು ಪೂರ್ಣವಾಗಿ ಮರುಪಾವತಿಸಿದ ಬಳಿಕ ಚರ ಅಥವಾ ಸ್ಥಿರಾಸ್ತಿಗಳ ದಾಖಲೆಗಳನ್ನು ಮರಳಿಸುವಲ್ಲಿ ಅಥವಾ ಸಂಬಂಧಿಸಿದ ರಿಜಿಸ್ಟ್ರಿಗೆ ಋಣಮುಕ್ತ ವರದಿಯನ್ನು ಸಲ್ಲಿಸುವಲ್ಲಿ ನಿಗದಿತ 30 ದಿನಗಳ ಗಡುವಿಗಿಂತ ಹೆಚ್ಚು ವಿಳಂಬವಾದರೆ ಅದಕ್ಕೆ ಕಾರಣಗಳನ್ನು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲಗಾರನಿಗೆ ತಿಳಿಸಬೇಕಾಗುತ್ತದೆ. ವಿಳಂಬಕ್ಕೆ ಅವುಗಳೇ ಕಾರಣವಾಗಿದ್ದರೆ ಪ್ರತಿ ದಿನಕ್ಕೆ 5,000 ರೂ.ಗಳಂತೆ ಪರಿಹಾರವನ್ನು ಸಾಲಗಾರನಿಗೆ ನೀಡಬೇಕಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ.

ಮೂಲ ದಾಖಲೆಗಳಿಗೆ ಹಾನಿಯಾದರೆ ಅಥವಾ ಕಳೆದುಹೋದರೆ ಏನಾಗುತ್ತದೆ?

ಇಂತಹ ಸಂದರ್ಭಗಳಲ್ಲಿ ಸಾಲಗಾರರು ಭಾಗಶಃ ಅಥವಾ ಸಂಪೂರ್ಣ ದಾಖಲೆಗಳ ಯಥಾಪ್ರತಿಗಳು ಅಥವಾ ಪ್ರಮಾಣೀಕೃತ ಪ್ರತಿಗಳನ್ನು ಪಡೆಯುವಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನೆರವಾಗಬೇಕು ಮತ್ತು ಅದಕ್ಕೆ ತಗಲುವ ಎಲ್ಲ ವೆಚ್ಚಗಳನ್ನು ಸ್ವತಃ ಭರಿಸಬೇಕು. ಇಂತಹ ಪ್ರಕರಣಗಳಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬ್ಯಾಂಕುಗಳಿಗೆ ಹೆಚ್ಚುವರಿ 30 ದಿನಗಳ ಸಮಯಾವಕಾಶ ಲಭ್ಯವಿರುತ್ತದೆ ಮತ್ತು ಪ್ರತಿ ದಿನಕ್ಕೆ 5,000 ರೂ.ದಂಡವನ್ನು ಒಟ್ಟು 60 ದಿನಗಳ ಅವಧಿಯ ಬಳಿಕ ಲೆಕ್ಕಹಾಕಲಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News