ರಿಸ್ಕ್ ವೇಟ್ ಹೆಚ್ಚಿಸಿದ ಆರ್‌ಬಿಐ
ಹೊಸದಿಲ್ಲಿ: ವಾಣಿಜ್ಯ ಬ್ಯಾಂಕ್ ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಮೇಲಿನ ಅಪಾಯದ ತೂಕ (ರಿಸ್ಕ್ ವೇಟ್)ವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಹೆಚ್ಚಿಸಿದೆ.
ಯಾವುದೇ ಸಾಲದ ಸುಸ್ತಿಗಳನ್ನು ಸರಿದೂಗಿಸಲು ಸಾಲಿಗರು ಮೀಸಲಿಡುವ ಬಂಡವಾಳವನ್ನು ರಿಸ್ಕ್ ವೇಟ್ ಎನ್ನಲಾಗುತ್ತದೆ. ರಿಸ್ಕ್ ವೇಟ್ ಅಧಿಕವಾಗಿದ್ದಲ್ಲಿ, ನಿರ್ದಿಷ್ಟ ವಿಧದ ಸಾಲಗಳನ್ನು ನೀಡುವುದು ಸಾಲಿಗರಿಗೆ ದುಬಾರಿಯಾಗುತ್ತದೆ. ಇದಕ್ಕಾಗಿ ಅವರು ಅಧಿಕ ಪ್ರಮಾಣದ ಬಂಡವಾಳವನ್ನು ಮೀಸಲಿಡಬೇಕಾಗುತ್ತದೆ.
ಆರ್ಬಿಐ ಪ್ರಕಟಿಸಿರುವ ಅಧಿಸೂಚನೆಯ ಪ್ರಕಾರ ವಸತಿನಿರ್ಮಾಣ, ಶಿಕ್ಷಣ, ವಾಹನ ಸಾಲಗಳು ಹಾಗೂ ಚಿನ್ನದ ಮೂಲಕ ಪಡೆದಂತಹ ಸಾಲಗಳನ್ನು ಹೊರತುಪಡಿಸಿ ಇತರ ಗ್ರಾಹಕ ಸಾಲಗಳ ಮೇಲಿನ ಅಪಾಯದ ತೂಕವನ್ನು 100ಶೇ.ದಿಂದ 125 ಶೇಕಡಕ್ಕೆ ಹೆಚ್ಚಿಸಲಾಗಿದೆ.
ಪ್ರಸಕ್ತ ವಾಣಿಜ್ಯ ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ ಸ್ವೀಕಾರಾರ್ಹತೆಯ ಅಪಾಯದ ತೂಕವು 125 ಶೇಕಡ ಆಗಿದ್ದರೆ ಎನ್ಬಿಎಫ್ಸಿಗಳ (ಬ್ಯಾಂಕೇತರ ಹಣಕಾಸು ಸಂಸ್ಥೆಗಳು)ಕ್ರೆಡಿಟ್ ಕಾರ್ಡ್ ಸ್ವೀಕಾರಾರ್ಹತೆಗಳ ರಿಸ್ಕ್ ವೇಟ್ 100 ಶೇಕಡ ಆಗಿದೆ. ಈ ಎರಡೂ ಶ್ರೇಣಿಗಳ ಅಪಾಯದ ತೂಕಗಳನ್ನು ತಲಾ ಶೇ.25ರಷ್ಟು ಹೆಚ್ಚಿಸಲು ಆರ್ಬಿಐ ನಿರ್ಧರಿಸಿದೆ.
ಬ್ಯಾಂಕ್ಗಳು ನೀಡುವ ವೈಯಕ್ತಿಕ ಸಾಲಗಳು ಹಾಗೂ ಎನ್ಬಿಎಫ್ಸಿಗಳು ನೀಡುವ ರಿಟೇಲ್ ಸಾಲಗಳಿಗೆ ನೂತನ ನೂತನ ರಿಸ್ಕ್ ವೇಟ್ ಅನ್ವಯವಾಗುತ್ತದೆ.
ವೈಯಕ್ತಿಕ ಸಾಲ ನೀಡಿಕೆಯಲ್ಲಿ ಅತ್ಯಧಿಕ ಹೆಚ್ಚಳವಾಗಿರುವುದನ್ನು ಆರ್ಬಿಐ ನಿಕಟವಾಗಿ ಗಮನಿಸುತ್ತಿದೆಯೆಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ ಒಂದು ವಾರದ ಬಳಿಕ ಈ ಬೆಳವಣಿಗೆಯುಂಟಾಗಿದೆ.
ಅಪಾಯದ ತೂಕ (ರಿಸ್ಕ್ ವೇಟ್)ದಲ್ಲಿ ಏರಿಕೆಯಿಂದಾಗಿ ಸಾಲ ನೀಡಿಕೆಯ ಪ್ರಮಾಣದ ಬೆಳವಣಿಗೆಯು ಕುಂಠಿತವಾಗುವ ನಿರೀಕ್ಷೆಯಿದೆಯೆಂದು ಆರ್ಬಿಐ ಮೂಲಗಳು ತಿಳಿಸಿವೆ.