ದಿಲ್ಲಿಗೂ ಅಚ್ಚರಿಯ ಸಿಎಂ; ದಿಲ್ಲಿಯ ನೂತನ ಸಿಎಂ ರೇಖಾ ಗುಪ್ತಾ ಯಾರು?

Update: 2025-02-19 21:21 IST

ರೇಖಾ ಗುಪ್ತಾ | PC :  X 

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಮತ್ತು ಶಾಲಿಮಾರ್ ಬಾಗ್ ಶಾಸಕಿ ರೇಖಾ ಗುಪ್ತಾ ಅವರನ್ನು ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ ಎಂದು ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಯ ನಂತರ ಬಿಜೆಪಿ ಮೂಲಗಳು ದೃಢಪಡಿಸಿವೆ. ಈ ಮೂಲಕ ಮಧ್ಯ ಪ್ರದೇಶ ಹಾಗು ರಾಜಸ್ಥಾನದಂತೆ ದಿಲ್ಲಿಗೂ ಅಚ್ಚರಿಯ ಸಿಎಂ ಅನ್ನು ಮೋದಿ, ಶಾ ಜೋಡಿ ನೀಡಿದೆ.

ಸಿಎಂ ಆಗುವ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ಪರ್ವೇಶ್ ವರ್ಮಾ ಅವರು ಡಿಸಿಎಂ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ.

ಬಿಜೆಪಿ ಮೂರು ಬಾರಿ ಕೌನ್ಸಿಲರ್ ಆಗಿರುವ ರೇಖಾ ಗುಪ್ತಾ ಅವರನ್ನು ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆ ಗೆಲ್ಲುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡುವ ಮೂಲಕ, ಬಿಜೆಪಿ ತನ್ನ ಮಹಿಳಾ ಮತದಾರರಿಗೆ ಸಂದೇಶವನ್ನು ರವಾನಿಸಲು ಪ್ರಯತ್ನಿಸಿದೆ.

ರೇಖಾ ಗುಪ್ತಾ ಮೂರು ಬಾರಿ ಬಿಜೆಪಿ ಕೌನ್ಸಿಲರ್ ಮತ್ತು ದಕ್ಷಿಣ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಮೇಯರ್ ಆಗಿದ್ದವರು.ಬುಧವಾರ ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ರೇಖಾ ಗುಪ್ತಾ ಅವರು ಮೊದಲ ಬಾರಿಗೆ ಶಾಸಕರಾಗಿರಬಹುದು, ಆದರೆ ಅವರು ರಾಜಕೀಯದಲ್ಲಿ ದೀರ್ಘ ಇನ್ನಿಂಗ್ಸ್ ಆಡಿದವರು. ಬಿಜೆಪಿ ರಾಜಕಾರಣದಲ್ಲಿ ರಾಜಧಾನಿ ದಿಲ್ಲಿಯಲ್ಲೇ ಪಳಗಿದವರು

ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಸೇರಿದಂತೆ ಇತರ ಪ್ರಮುಖ ಮುಖಗಳಿಗಿಂತ ಅವರನ್ನು ದಿಲ್ಲಿ ಸಿಎಂ ಆಗಿ ಆಯ್ಕೆ ಮಾಡುವ ಮೂಲಕ, ಬಿಜೆಪಿ ಮಹಿಳೆಯರ ಓಟ್ ಬ್ಯಾಂಕ್ ಅನ್ನು ಗಟ್ಟಿ ಮಾಡಿಕೊಳ್ಳಲು ಹೊರಟಿದೆ.

41 ವರ್ಷದ ರೇಖಾ ಗುಪ್ತಾ ಅವರು ಇತ್ತೀಚಿನ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶಾಲಿಮಾರ್ ಬಾಗ್ ವಿಧಾನ ಸಭಾ ಸ್ಥಾನವನ್ನು ಸುಮಾರು 30,000 ಮತಗಳ ಅಂತರದಿಂದ ಗೆದ್ದಿದ್ದರು.

"ಕಾಮ್ ಹೀ ಪೆಹಚಾನ್" (ನನ್ನ ಕೆಲಸ ನನ್ನ ಗುರುತು). ಇದು ಬಿಜೆಪಿ ನಾಯಕಿ ತಮ್ಮ ವೆಬ್‌ಸೈಟ್‌ನಲ್ಲಿ ತಮ್ಮ ಪ್ರಚಾರಕ್ಕಾಗಿ ಬಳಸಿದ ಟ್ಯಾಗ್‌ಲೈನ್ ಆಗಿತ್ತು.

ದಿಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಶಿಶ್ ಸೂದ್, ಮಾಜಿ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ, ಸತೀಶ್ ಉಪಾಧ್ಯಾಯ ಮತ್ತು ಜಿತೇಂದ್ರ ಮಹಾಜನ್ ಹಾಗು ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಅವರು ಸಿಎಂ ಸ್ಥಾನಕ್ಕೆ ಕೆಲವು ಪ್ರಮುಖ ಸ್ಪರ್ಧಿಗಳಾಗಿದ್ದರು.

ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಚುನಾವಣೆಯೊಂದಿಗೆ ರೇಖಾ ಗುಪ್ತಾ ರಾಜಕೀಯಕ್ಕೆ ಕಾಲಿಟ್ಟರು. ಅವರು ಮೂರು ಬಾರಿ ಕೌನ್ಸಿಲರ್ ಮತ್ತು ದಕ್ಷಿಣ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (SDMC) ನ ಮಾಜಿ ಮೇಯರ್ ಆಗಿದ್ದಾರೆ. ರೇಖಾ ಗುಪ್ತಾ ಅವರು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿದ್ದಾರೆ. ಅವರು ಈ ಹಿಂದೆ ದಿಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ರೇಖಾ ಗುಪ್ತ ದೌಲತ್ ರಾಮ್ ಕಾಲೇಜಿನಿಂದ ಪದವಿ ಪಡೆದವರು ಮತ್ತು 1996-97ರ ಅವಧಿಯಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ DUSU ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ಮೊದಲು 2007 ರಲ್ಲಿ ಉತ್ತರ ಪಿತಂಪುರದಿಂದ ಕೌನ್ಸಿಲರ್ ಆಗಿ ಆಯ್ಕೆಯಾದವರು.

ರೇಖಾ ಗುಪ್ತಾ ಅವರನ್ನು ದಿಲ್ಲಿ ಸಿಎಂ ಮಾಡುವ ಮೂಲಕ, ಬಿಜೆಪಿ ಮಹಿಳಾ ಮುಖ್ಯಮಂತ್ರಿಗಳ ಪರಂಪರೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಅವರ 15 ವರ್ಷಗಳ ಆಳ್ವಿಕೆ ಸೇರಿದಂತೆ ದಿಲ್ಲಿ ಇನ್ನೂ ಇಬ್ಬರು ಮಹಿಳಾ ಮುಖ್ಯಮಂತ್ರಿಗಳನ್ನು ಈಗಾಗಲೇ ಕಂಡಿದೆ. ದಿಲ್ಲಿಯ ಇತರ ಮಹಿಳಾ ಮುಖ್ಯಮಂತ್ರಿಗಳು ಎಎಪಿಯ ಅತಿಶಿ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್ ಆಗಿದ್ದರು.

ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನೇ ಕೆಡವಿದ ಪರ್ವೇಶ್ ವರ್ಮಾ ಸಿಎಂ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದರು. ಆದರೆ ಅವರಿಗೆ ನಿರಾಸೆಯಾಗಿದೆ. ಅವರು ಈಗ ಡಿಸಿಎಂ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಇವರು ದಿಲ್ಲಿಯ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ. ಮಾಜಿ ಸಂಸದ. ದ್ವೇಷ ಭಾಷಣಕ್ಕೆ ಕುಖ್ಯಾತಿ ಪಡೆದವರು. ಖಟ್ಟರ್ ಹಿಂದುತ್ವವಾದಿಯಾಗಿ ಗುರುತಿಸಿಕೊಂಡವರು. ಕೇಜ್ರಿವಾಲ್ ಗೆ ಸರಿಸಮಾನ ನಾಯಕರಿಲ್ಲ ಎಂಬ ಅಂದಾಜನ್ನು ಸುಳ್ಳಾಗಿಸಿ ಕೇಜ್ರಿವಾಲ್ ರನ್ನೇ ಸೋಲಿಸಿದ ಪರ್ವೇಶ್ ವರ್ಮಾ ಸಿಎಂ ಸ್ಥಾನಕ್ಕೆ ವರಿಷ್ಠರ ಮೊದಲ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು. ಆದರೆ ಬಿಜೆಪಿ ವರಿಷ್ಠರ ಲೆಕ್ಕಾಚಾರ ಬೇರೇನೇ ಇತ್ತು. ರಾಜಧಾನಿಯ ಸಿಎಂ ಪಟ್ಟ ಎಲ್ಲ ಹಿರಿಯರನ್ನು ಬದಿಗೊತ್ತಿ ಮಹಿಳಾ ನಾಯಕಿಗೆ ಒಲಿದಿದೆ.

ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ 44 ಸ್ಥಾನಗಳ ಸ್ಪಷ್ಟ ಬಹುಮತವನ್ನು ಗಳಿಸುವ ಮೂಲಕ 27 ವರ್ಷಗಳ ನಂತರ ಬಿಜೆಪಿ ದಿಲ್ಲಿಯಲ್ಲಿ ಅಧಿಕಾರಕ್ಕೆ ಮರಳಿದೆ. ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭವು ಫೆಬ್ರವರಿ 20 ರಂದು ರಾಮಲೀಲಾ ಮೈದಾನದಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News