ಪಂಜಾಬ್: ಶಿವಸೇನೆ ನಾಯಕನನ್ನು ಬೈಕ್ ನಲ್ಲಿ ಬೆನ್ನಟ್ಟಿ ಗುಂಡಿಕ್ಕಿ ಹತ್ಯೆ

ಮಂಗತ್ ರಾಯ್ ಮಾಂಗಾ (Photo credit: NDTV)
ಮೋಗಾ: ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೋಗಾ ಜಿಲ್ಲೆಯ ಶಿವಸೇನೆ ಗುಂಪಿನ ಅಧ್ಯಕ್ಷ ಹತ್ಯೆಗೀಡಾಗಿದ್ದು, ಓರ್ವ ಬಾಲಕ ಗಾಯಗೊಂಡಿದ್ದಾನೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ ಶಿವಸೇನೆಯ ಮೋಗಾ ಜಿಲ್ಲಾ ಘಟಕದ ಅಧ್ಯಕ್ಷ ಮಂಗತ್ ರಾಯ್ ಮಾಂಗಾ ಹಾಲು ಖರೀದಿಸುವಾಗ ಈ ಘಟನೆ ನಡೆದಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೂವರು ಅಪರಿಚಿತ ದುಷ್ಕರ್ಮಿಗಳು ರಾತ್ರಿ ಸುಮಾರು 10 ಗಂಟೆ ವೇಳೆಗೆ ಮಾಂಗಾರತ್ತ ಗುಂಡು ಹಾರಿಸಿದರು. ಆದರೆ, ಅದು ಗುರಿ ತಪ್ಪಿ ಬಳಿಯಲ್ಲೇ ಇದ್ದ 12 ವರ್ಷದ ಬಾಲಕನಿಗೆ ತಗುಲಿತು. ತಕ್ಷಣವೇ ಮಾಂಗಾ ಅಲ್ಲಿಂದ ಬೈಕ್ ನಲ್ಲಿ ಪರಾರಿಯಾದರು. ಆದರೆ, ಅವರನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ಅವರಿಗೆ ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಂಗಾರನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ಮತ್ತೆ ಅವರತ್ತ ಗುಂಡು ಹಾರಿಸಿದ್ದಾರೆ. ನಂತರ, ಅವರು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮಾಂಗಾರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಮಾಂಗಾ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡಿದ್ದ ಬಾಲಕನನ್ನು ಮೊದಲಿಗೆ ಮೋಗಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ನಂತರ ಉತ್ತಮ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಂಗಾ ಯಾವ ಶಿವಸೇನೆ ಬಣದೊಂದಿಗೆ ಗುರುತಿಸಿಕೊಂಡಿದ್ದರು ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.