ಪತ್ರಿಕೆಗಳ ಧ್ವನಿ ಹತ್ತಿಕ್ಕಲಾಗದು: ಖಾಲಿ ಸಂಪಾದಕೀಯ ಪ್ರಕಟಿಸಿದ ತೆಲಂಗಾಣ ಉರ್ದು ದೈನಿಕ

PC: x.com/ndtv
ಹೈದರಾಬಾದ್: ತೆಲಂಗಾಣದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ನಮ್ಮ ಪತ್ರಿಕೆಗೆ ನೀಡುತ್ತಿರುವ ಸರ್ಕಾರಿ ಜಾಹೀರಾತನ್ನು ಸಂಪೂರ್ಣ ಸ್ಥಗಿತಗೊಳಿಸಿದೆ ಎಂದು ಆಪಾದಿಸಿ, ಪ್ರತಿಭಟನಾರ್ಥವಾಗಿ ಸಂಪಾದಕೀಯ ಜಾಗವನ್ನು ಖಾಲಿ ಬಿಟ್ಟು ಉರ್ದು ದೈನಿಕವೊಂದು ಪ್ರಕಟವಾದ ಘಟನೆ ವರದಿಯಾಗಿದೆ.
1970ರ ದಶಕದಲ್ಲಿ ಇಂದಿರಾಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭವನ್ನು ನೆನಪಿಸುವ ರೀತಿಯಲ್ಲಿ ಪ್ರಸಕ್ತ ರಾಜ್ಯ ಸರ್ಕಾರದ ಲೋಪಗಳನ್ನು ಎತ್ತಿ ಹಿಡಿದ ಕಾರಣಕ್ಕೆ ಪತ್ರಿಕೆಯನ್ನು ಶಿಕ್ಷಿಸಲಾಗುತ್ತಿದೆ ಎಂದು ಮುನ್ಸಿಫ್ ಡೈಲಿ ಆಪಾದಿಸಿದೆ.
ಆದರೆ ಕಾಂಗ್ರೆಸ್ ವಕ್ತಾರರು ಇದನ್ನು ಅಲ್ಲಗಳೆದಿದ್ದು, ಪತ್ರಿಕಾ ಜಾಹೀರಾತಿನ ಮೇಲಿನ ವೆಚ್ಚವನ್ನು ಸರ್ಕಾರ ಕಡಿತಗೊಳಿಸಿದೆ ಎಂದು ಸಮುಜಾಯಿಷಿ ನೀಡಿದ್ದಾರೆ. ಜತೆಗೆ ಯಾರನ್ನು ಬೆಂಬಲಿಸಬೇಕು ಎನ್ನುವುದು ಸರ್ಕಾರದ ವಿಶೇಷಾಧಿಕಾರ ಎಂದು ಸಮರ್ಥಿಸಿಕೊಂಡಿದ್ದಾರೆ.
"ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದ ಕೋಮು ಗಲಭೆ ಘಟನೆಗಳನ್ನು ಪತ್ರಿಕೆ ಬಹಿರಂಗಪಡಿಸಿತ್ತು. ಪೊಲೀಸ್ ವೈಫಲ್ಯ ಮತ್ತು ಸರ್ಕಾರದ ನಿಷ್ಕ್ರಿಯತೆಯನ್ನು ಎತ್ತಿ ಹಿಡಿದಿತ್ತು. ಚಿಲ್ಕೂರಿನಲ್ಲಿ ಮಸೀದಿಯೊಂದನ್ನು ಕೆಡವಿದ ಘಟನೆಯನ್ನು ವರದಿ ಮಾಡಲಾಗಿತ್ತು. ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ಸಮವಸ್ತ್ರದಿಂದ ದುಪ್ಪಟ ತೆಗೆದುಹಾಕಿದ್ದನ್ನು, ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಸರ್ಕಾರ ವಿಫಲವಾಗಿದ್ದನ್ನು ಕೂಡಾ ಪತ್ರಿಕೆ ಬೆಳಕಿಗೆ ತಂದಿತ್ತು. ಇಮಾಮ್ ಗಳ ವೇತನ ವಿಳಂಬ, ವಿಚ್ಛೇದಿತ ಮಹಿಳೆಯರಿಗೆ ಜೀವನಾಂಶ ಪಾವತಿಸದೇ ಇರುವುದು ಮತ್ತಿತರ ಕ್ರಮಗಳ ಬಗ್ಗೆಯೂ ಮುನ್ಸಿಫ್ ಪ್ರಶ್ನಿಸಿತ್ತು" ಎಂದು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಥೆರ್ ಮೊಯಿನ್ ಹೇಳಿದ್ದಾರೆ.
ತೆಲಂಗಾಣ ಸರ್ಕಾರದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡದ ರಾಜ್ಯ ಸರ್ಕಾರ ಇದೇ ಕಾರಣಕ್ಕೆ ಮೋದಿ ಸರ್ಕಾರವನ್ನು ಟೀಕಿಸುತ್ತಿದೆ ಎನ್ನುವುದನ್ನೂ ಪತ್ರಿಕೆ ವರದಿ ಮಾಡಿತ್ತು ಎಂದು ವಿವರಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ ತೆಲಂಗಾಣ ಹಾಲು ಮತ್ತು ಜೇನಿನ ನಾಡಾಗಿ ಪರಿವರ್ತನೆಯಾಗಿದೆ ಎಂದು ಓದುಗರ ಮನವೊಲಿಸಬೇಕು ಎಂದು ಸರ್ಕಾರ ನಿರೀಕ್ಷಿಸಿದರೆ, ನಾವು ಹಾಗೆ ಮಾಡಲು ಸಾಧ್ಯವಿಲ್ಲ. ಬದಲಾಗಿ ನಾವು ಭೂಮಿ ಏಕೆ ಬರಡಾಗಿದೆ? ಬಡವರನ್ನು ಹಸಿವು ಏಕೆ ಮಾಡುತ್ತಿದೆ?ಎಂದು ನಾವು ಪ್ರಶ್ನಿಸುವುದನ್ನು ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.