ಕೇಂದ್ರ ಸರ್ಕಾರ ಮಂಡಿಸಿದ ಶ್ವೇತಪತ್ರ ಒಪ್ಪುವುದಿಲ್ಲ ಎಂದು ಹೇಳಿ ನಿಲುವಳಿ ಮಂಡಿಸಿದ ಆರ್‌ಎಸ್‌ಪಿ ಸಂಸದ
ಹೊಸದಿಲ್ಲಿ: ಕೇಂದ್ರ ಸರ್ಕಾರ ಗುರುವಾರ ಮಂಡಿಸಿದ ಭಾರತದ ಆರ್ಥಿಕತೆ ಕುರಿತ ಶ್ವೇತ ಪತ್ರವನ್ನು ಒಪ್ಪುವುದಿಲ್ಲ ಎಂದು ಹೇಳಿಕೊಂಡು ಆರ್‌ಎಸ್‌ಪಿ ಸಂಸದ ಎನ್ ಕೆ ಪ್ರೇಮಚಂದ್ರನ್ ಇಂದು ಲೋಕಸಭೆಯಲ್ಲಿ ನಿಲುವಳಿ ಮಂಡಿಸಿದ್ದಾರೆ. ಈ ಶ್ವೇತಪತ್ರವು ಹಿಂದಿನ ಯುಪಿಎ ಸರ್ಕಾರದ ಉತ್ತಮ ಪ್ರಯತ್ನಗಳನ್ನು ಕಡೆಗಣಿಸುವ ರಾಜಕೀಯ ಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.
“ಕಳೆದ 10 ವರ್ಷಗಳಲ್ಲಿ ಅಧಿಕಾರದಲ್ಲಿದ್ದುಕೊಂಡು ಹಿಂದಿನ ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವುದು ನ್ಯಾಯಯುತವಲ್ಲ ಹಾಗೂ ಸಂಸದೀಯ ಪ್ರಜಾಪ್ರಭುತ್ವದ ಎಲ್ಲಾ ಮೂಲಭೂತ ತತ್ವಗಳ ವಿರುದ್ಧವಾಗಿದೆ,” ಎಂದು ಅವರು ಹೇಳಿದ್ದಾರೆ.
“ಇದು ಹಿಂದಿನ ಯುಪಿಎ ಸರ್ಕಾರದ ಮೌಲ್ಯಯುತ ಪ್ರಯತ್ನಗಳು ಹಾಗೂ 2004-2014 ಅವಧಿಯಲ್ಲಿ ದೇಶಕ್ಕೆ ಖ್ಯಾತ ಅರ್ಥಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ತಜ್ಞರು ನೀಡಿದ ಕೊಡುಗೆಯನ್ನು ಅವಗಣಿಸುವ ಯತ್ನ,” ಎಂದು ಅವರು ಹೇಳಿದ್ದಾರೆ.
“ಎನ್‌ಡಿಎ ಸರ್ಕಾರದ ಆಡಳಿತದ ಕಳೆದ ಹತ್ತು ವರ್ಷ ಅವಧಿಯಲ್ಲಿ ದೇಶದಲ್ಲಿ ನಿರುದ್ಯೋಗ, ಹಣದುಬ್ಬರ ಪ್ರಮಾಣ ಅಪಾರ ಏರಿಕೆಯಾಗಿದೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡತನವೂ ಹೆಚ್ಚಾಗಿದೆ,” ಎಂದು ಅವರು ಹೇಳಿದ್ದಾರೆ.
“ಈಗಿನ ಸರ್ಕಾರದ ವೈಫಲ್ಯಗಳಿಗೆ ಹಿಂದಿನ ಸರ್ಕಾರವನ್ನು ದೂರಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ,” ಎಂದು ಅವರು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಸೌಗತ ರಾಯ್ ಕೂಡ ನಿಲುವಳಿ ಮಂಡಿಸಿ ಸರ್ಕಾರದ ಶ್ವೇತಪತ್ರವನ್ನು “ಫ್ಲಾಪ್” ದಾಖಲೆ ಎಂದು ಬಣ್ಣಿಸಿದ್ದಾರೆ.